ಶ್ರೀ ಥಾವರ್‌ ಚಂದ್‌ ಗೆಹ್ಲೋಟ್
ಘನತೆವೆತ್ತ ರಾಜ್ಯಪಾಲರು

Back
ರಾಜಭವನದ ಇತಿಹಾಸ

ರಾಜಭವನ ಇತಿಹಾಸ

ಬೆಂಗಳೂರಿನಲ್ಲಿರುವ ರಾಜಭವನವು ಪ್ರವಾಸಿಗರು ಸುಲಭವಾಗಿ ಭೇಟಿ ನೀಡುವಂಥ ಸ್ಥಳವಲ್ಲ. ಸಾಮಾನ್ಯ ಜನರಿಗೆ ಇದು ಇನ್ನೂ ನಿಗೂಢವಾಗಿದೆ. ವಸಾಹತುಶಾಹಿಯ ಕಾಲದಿಂದಲೂ ಈ ಕಟ್ಟಡವು ಯಾವಾಗಲೂ ಅಧಿಕಾರ ಕೇಂದ್ರಿತ ಸ್ಥಳವಾಗಿ ಉಳಿದಿದೆ ಹಾಗೂ ಇದು ಅತ್ಯುನ್ನತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಮತ್ತು ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ಆಡಳಿತಕ್ಕೆ ನೂತನ ಮಾರ್ಗದರ್ಶನವನ್ನು ನೀಡಿರುವಂಥ ಸರ್‍. ಮಾರ್ಕ್‍ ಕಬ್ಬನ್‍ ಮತ್ತು ಎಲ್‍.ಬಿ. ಬೌರಿಂಗ್‍ನಂಥ ಶ್ರೇಷ್ಠ ಆಡಳಿತಗಾರರು ಇದರ ಮೂಲದೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ, ಇದರ ಇತಿಹಾಸ ನಿಗೂಢ ಕುತೂಹಲಕರವಾಗಿಯೇ ಉಳಿದಿದೆ.

ರಾಜಭವನವು ಬ್ರಿಟಿಷ್‍ ಯುಗವನ್ನು ಪ್ರತಿಬಿಂಬಿಸುತ್ತದೆ, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಹಾದು ನಡುವೆ ಕಮಿಷನರ್‍ ಆಳ್ವಿಕೆಯ ಮುಖಾಂತರ ಬ್ರಿಟಿಷರ ನೇರ ಆಡಳಿತಕ್ಕೆ ಒಳಗಾಗಿ ನಂತರ ಭಾರತದ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿ ನಿಂತು ಭಾರತ ಗಣರಾಜ್ಯಕ್ಕೆ ತನ್ನ ಪಾದಾರ್ಪಣೆ ಮಾಡಿದೆ.

ಕಮಿಷನರ್ರ ನಿವಾಸವಾಗಿ| ರೆಸಿಡೆನ್ಸಿಯಿಂದ ರಾಜಭವನದವರೆಗೆ| ರೆಸಿಡೆನ್ಸಿ ಮತ್ತು ಅದರ ನವೀಕರಣಗಳು| ರೆಸಿಡೆನ್ಸಿಯ ಗೌರವಾನ್ವಿತ ಅತಿಥಿಗಳು| ಸ್ವಾತಂತ್ರ್ಯ ನಂತರದ ಕಾಲ| ನಿವಾಸಿಗಳ ಪಟ್ಟಿ.

ಕಮೀಷನರ್‍ರ ನಿವಾಸವಾಗಿ

 

ಕಮೀಷನರ್ ಹುದ್ದೆಯನ್ನು ಅಲಂಕರಿಸಿದಂಥ ಬ್ರಿಟಿಷ್‍ ಅಧಿಕಾರಿಯೊಬ್ಬರು ತನ್ನ ಖಾಸಗಿ ನಿವಾಸವಾಗಿ ರಾಜಭವನ ಕಟ್ಟಡವನ್ನು ನಿರ್ಮಿಸಿದರು. ಅನಂತರ ಬಂದ ಕಮೀಷನರುಗಳು ಅದನ್ನು ಅವರ ಅಧಿಕೃತ ನಿವಾಸವನ್ನಾಗಿ ಮಾಡಿಕೊಳ್ಳಲು ಸರ್ಕಾರದ ಹಣದಿಂದ ಅದನ್ನು

ಖರೀದಿಸಿದರು. ಆ ದಿನಗಳಲ್ಲಿ ಸರ್ಕಾರವು ಬ್ರಿಟೀಷ್‍ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ಒದಗಿಸುವ ಸಂಪ್ರದಾಯವಿರಲಿಲ್ಲ.

1834ರಿಂದ 1861ರ ವರೆಗೆ ಬ್ರಿಟಿಷರ ಮೈಸೂರು ಪ್ರಾಂತ್ಯದ ಕಮೀಷನರ್‍ ಆಗಿದ್ದಂಥ ಸರ್. ಮಾರ್ಕ್‍ ಕಬ್ಬನ್‍ರವರು ಹಣ ನೀಡಿ ಈ ಸ್ವತ್ತನ್ನು ಖರೀದಿಸಿದರು ಹಾಗೂ 1840-1842ರ ಅವಧಿಯಲ್ಲಿ ತಮ್ಮ ಅಭಿರುಚಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ತಮ್ಮ ಸ್ವಂತ ಹಣದಿಂದ ಔಟ್‍ಹೌಸ್ ಮತ್ತು ಕುದುರೆ ಲಾಯಗಳೊಂದಿಗೆ ಈ ಬಂಗಲೆಯನ್ನು ಕಟ್ಟಿಸಿದರು.

1840ರಲ್ಲಿ ಮಾರ್ಕ್‍ ಕಬ್ಬನ್‍ ರವರು ಈ ಬಂಗಲೆಯನ್ನು ಕಟ್ಟಿಸಿದಾಗ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳು ಇರಲಿಲ್ಲ. ಇದು, ಈಗ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮಹಾನಗರದ ಹೃದಯ ಭಾಗವಾಗಿದೆ.

ಕಬ್ಬನ್‍ರವರಿಗೆ ಅರೇಬಿಯನ್‍ ಕುದುರೆಗಳ ಬಗ್ಗೆ ತುಂಬಾ ಒಲವಿದ್ದು, ಕನಿಷ್ಠಐವತ್ತು ಕುದುರೆಗಳನ್ನು ತಮ್ಮ ಕುದುರೆ ಲಾಯದಲ್ಲಿ ಇಟ್ಟುಕೊಂಡಿರುತ್ತಿದ್ದರು. ಔಟ್‍ಹೌಸ್‍ ಮತ್ತು ಕುದುರೆ ಲಾಯಗಳೂ ಇರುವ ಮೂಲ ಕಮೀಷನರರ ಬಂಗಲೆಯನ್ನು ಅವಿವಾಹಿತರಾಗಿದ್ದ ಕಬ್ಬನ್‍ರವರ ಸೀಮಿತ ಅವಶ್ಯಕತೆಗಳನ್ನು ಪೂರೈಸಲು ಮಾತ್ರ ನಿರ್ಮಿಸಲಾಗಿತ್ತು. ಕೆಲವು ಸಂದರ್ಭಗಳಲ್ಲಿ ಇದು ಅವಶ್ಯಕತೆಗಳಿಗಿಂತ ಕಿರಿದಾಗಿದ್ದು, ಅತಿಥಿಗಳ ವಾಸಕ್ಕೆ ಸೌಲಭ್ಯ ಕಲ್ಪಿಸಲು ಉದ್ಯಾನಗಳಲ್ಲಿ ಡೇರಾಗಳನ್ನು ಹಾಕಬೇಕಾಗಿತ್ತು.

ಕಬ್ಬನ್‍ ಅವರು ಹೋದ ನಂತರ, ಕಬ್ಬನ್‍ರವರ ಬಂಗಲೆ ಮತ್ತು ಇನ್ನಿತರೆ ಸ್ವತ್ತುಗಳು ಅವರ ಏಜೆಂಟ್‍ ಆದ ಮೇಜರ್‍ ಪ್ರೆಡೆರಿಕ್‍ ಗ್ರೇ ಅವರ ಉಸ್ತುವಾರಿಗೆ ಬಂದಿತು. ಆಗ ಬಂಗಲೆಯನ್ನು ಮಾರಾಟಕ್ಕೆ ಇಡಲಾಯಿತು. ಆದರೆ, ಕಬ್ಬನ್‍ರ ಆನಂತರ ಕಮೀಷನ್‍ರ್‍ ಆಗಿ ಬಂದಂತಹ ಲೆವಿನ್‍ ಬೆಂಥಾಮ್ ಬೌರಿಂಗ್‍ ಅವರು ನವೆಂಬರ್‍ 13, 1862 ರಂದು ಅದರ ವಿಶಾಲವಾದ ಎಸ್ಟೇಟ್‍ನೊಂದಿಗೆ ಆ ಬಂಗಲೆಯನ್ನು ಖರೀದಿಸಿದರು.

ನಿಮಗಿದು ಗೊತ್ತೆ?

  • ಈ ಕಟ್ಟಡವನ್ನು ಖರೀದಿ ಮಾಡುವ ಮೊದಲು, ಕಮೀಷನರ್‍ ಅವರು ಕಟ್ಟಡಕ್ಕಾಗಿ ಮೇಜರ್‍ ಗ್ರೇ ಅವರಿಗೆ ತಿಂಗಳಿಗೆ 200 ರೂಪಾಯಿಗಳ ಬಾಡಿಗೆಯನ್ನು ನೀಡುತ್ತಿದ್ದರು. ಆಗ ಬೌರಿಂಗ್‍ರವರು ಸರ್ಕಾರಕ್ಕೆ ಈ ಕಟ್ಟಡವನ್ನು ಖರೀದಿಸದಿದ್ದಲ್ಲಿ, ಈ ಬಂಗಲೆಯು ಇಂದಿಗೂ ಖಾಸಗಿ ಸ್ವತ್ತಾಗಿರುತ್ತಿತ್ತು!
  • ರಾಜಭವನ ಕಟ್ಟಡವನ್ನು 1860ಕ್ಕೂ ಮುಂಚೆ ಮಾರಾಟಕ್ಕಿಟ್ಟಾಗ, ಅಘಾ ಅಲಿ ಆಸ್ಕರ್‍ ಅವರು ಇದನ್ನು ಕೊಂಡುಕೊಳ್ಳಲು 28,000/- ರೂಪಾಯಿಗಳನ್ನು ಕೊಡಲು ಮುಂದಾಗಿದ್ದರು!
  • ಹಳೆಯ ರೆಸಿಡೆನ್ಸಿ ಕಟ್ಟಡದ ದಕ್ಷಿಣದ ಭಾಗದ ರಸ್ತೆಯನ್ನು ಇಂದಿಗೂ ಸಹ “ರೆಸಿಡೆನ್ಸಿ ರಸ್ತೆ” ಎಂದು ಕರೆಯಲಾಗುತ್ತದೆ!

ಹಳೆಯ ರೆಸಿಡೆನ್ಸಿ ಕಟ್ಟಡ>

1831ರಲ್ಲಿ ಬೆಂಗಳೂರು ರೆಸಿಡೆನ್ಸಿ ಕೇಂದ್ರ ಸ್ಥಾನವಾದ ನಂತರ, ಮೊದಲನೇ ರೆಸಿಡೆಂಟ್‍ನು ಈಗ ಭಾರತೀಯ ಸ್ಟೇಟ್‍ ಬ್ಯಾಂಕ್‍ ಇರುವ ಕಟ್ಟಡದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಬ್ರಿಟಿಷ್‍ ರೆಸಿಡೆಂಟರು 1831ರಿಂದ ಜನವರಿ 1843ರ ವರೆಗೆ ರೆಸಿಡೆಂಟ್‍ ಹುದ್ದೆಯು ರದ್ದುಗೊಳ್ಳುವವರೆಗೂ ಈ ಕಟ್ಟಡವೇ ಅವರ ನಿವಾಸವಾಗಿತ್ತು. ರೆಸಿಡೆಂಟ್‍ರು ಈ ಕಟ್ಟಡದಲ್ಲಿ ನೆಲೆಸಿದ್ದಾಗ, ಮಾರ್ಕ್‍ ಕಬ್ಬನ್‍ ಅವರುಕಮೀಷನರ್‍ ಬಂಗಲೆಯಲ್ಲಿ ವಾಸವಾಗಿದ್ದರು.

1881ರಲ್ಲಿ ಮೈಸೂರು ಮಹಾರಾಜರ ಕುಟುಂಬಕ್ಕೆ ಅಧಿಕಾರವನ್ನು ಮರಳಿ ಹಸ್ತಾಂತರಿಸುವುದರೊಂದಿಗೆ ಕಮೀಷನರ್‍ ಹುದ್ದೆಯನ್ನು ರದ್ದುಗೊಳಿಸಲಾಯಿತು ಹಾಗೂ ರೆಸಿಡೆಂಟ್‍ ಹುದ್ದೆಯನ್ನು ಪುನರ್‍ ಸೃಜಿಸಲಾಯಿತು. ರೆಸಿಡೆಂಟ್‍ಗೆ ಈ ಹಿಂದಿನ ಕಮೀಷನರುಗಳ ಬಂಗಲೆಯಲ್ಲಿ (ಎಂದರೆ, ರಾಜಭವನದಲ್ಲಿ) ವಸತಿಯನ್ನು ಕಲ್ಪಿಸಲಾಯಿತು. ನಂತರ ಅದನ್ನು ಆಗಸ್ಟ್‍ 15, 1947ರಂದು ಭಾರತ ಸ್ವಾತಂತ್ರ್ಯ ಪಡೆಯುವವರೆಗೆ, “ರೆಸಿಡೆನ್ಸಿ” ಎಂದು ಕರೆಯಲಾಗುತ್ತಿತ್ತು.

ಈ 66 ವರ್ಷಗಳಅವಧಿಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ರೆಸಿಡೆಂಟ್‍ರುಗಳು ಈ ಕಟ್ಟಡದಲ್ಲಿ ವಾಸವಾಗಿದ್ದರು ಹಾಗೂ ಇದು ಕಾಲಕಾಲಕ್ಕೆ ಹಲವಾರು ಬದಲಾವಣೆಗಳನ್ನು ಹಾಗೂ ಸೇರ್ಪಡೆಗಳನ್ನು ಕಂಡಿದೆ.

‘ರೆಸಿಡೆನ್ಸಿ’ ಯಿಂದ ‘ರಾಜಭವನ’ ಆದದ್ದು

ಮೈಸೂರು ರಾಜ್ಯದ ‘ರೆಸಿಡೆನ್ಸಿ’ಯನ್ನು ಮೊದಲು 1799ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಯಿತು. ನಂತರ ಇದನ್ನು ಕ್ರಿ.ಶ 1804ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಇದು 1843ರಲ್ಲಿ ರದ್ದಾಗಿ ನಂತರ 1881ರಲ್ಲಿ ಬೆಂಗಳೂರಿನಲ್ಲಿ ಇದು ಪುನರ್‍ ಸೃಜನೆಯಾಗಿದ್ದು ಸಹ ಬೆಂಗಳೂರಿನಲ್ಲಿಯೇ ಆಗಿತ್ತು. ಅಂತಿಮವಾಗಿ 1947ರಲ್ಲಿ ಸಂಪೂರ್ಣವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವುದರೊಂದಿಗೆ ಈ ಹುದ್ದೆ ಇಲ್ಲವಾಯಿತು.

ಕ್ರಿ.ಶ. 1799 ರಲ್ಲಿ ಟಿಪ್ಪು ಸುಲ್ತಾನನ ಪತನದ ತರುವಾಯ ಮೊದಲು ಶ್ರೀರಂಗಪಟ್ಟಣದಲ್ಲಿ ಬೀಡುಬಿಟ್ಟಂಥ ಬ್ರಿಟಿಷ್ ಸೈನ್ಯವನ್ನು ತದನಂತರ ಕ್ರಿ.ಶ. 1809ರಲ್ಲಿ ಬೆಂಗಳೂರಿನ ಸಿವಿಲ್ ಮತ್ತು ಮಿಲಿಟರಿ ಠಾಣೆಗೆ ಸ್ಥಳಾಂತರಿಸಲಾಯಿತು.

ಬೆಂಗಳೂರಿನ ಹಿತಕರವಾದ ವಾತಾವರಣವು ಆಳುವ ವರ್ಗವನ್ನು ಆಕರ್ಷಿಸಿತು ಹಾಗೂ ಬೆಂಗಳೂರಿನ ಹಳೆಯ ಪಟ್ಟಣಕ್ಕೆ ಸಮೀಪದಲ್ಲಿ ಪ್ರಸಿದ್ಧ ಮಿಲಿಟರಿ ಕಂಟೋನ್ಮೆಂಟ್‍ನ ಸ್ಥಾಪನೆಗೆ ಕಾರಣವಾಯಿತು. ಈ ಪ್ರದೇಶವು ಕೇವಲ ಬ್ರಿಟಿಷರ ಮಿಲಿಟರಿ ನೆಲೆಯಾಗಿರಲಿಲ್ಲ,ಜೊತೆಗೆ ಇದು ಹೆಚ್ಚಿನ ಸಂಖ್ಯೆಯ ಯುರೋಪಿಯನ್ನರು, ಆಂಗ್ಲೋ-ಇಂಡಿಯನ್ನರು ಹಾಗೂ ಮಿಷನರಿಗಳ ವಸಾಹತು ಪ್ರದೇಶವೂ ಕೂಡಾ ಆಯಿತು.

 

 

 

ನಿಮಗಿದು ಗೊತ್ತೇ

  • ಮುಂದೆ ಬ್ರಿಟಿಷ್ ಪ್ರಧಾನಿಯಾದ ಸರ್ ವಿನ್‍ಸ್ಟನ್ ಚರ್ಚಿಲ್ 1897 ರಿಂದ 1900ರ ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರಿಗೆ ನಾಗರೀಕ ಮತ್ತು ಮಿಲಿಟರಿ ನೆಲೆಯುಆತಿಥ್ಯ ವಹಿಸಿತ್ತು.

1947ರಲ್ಲಿ ರೆಸಿಡೆನ್ಸಿಯ ಅಸ್ತಿತ್ವವು ಕೊನೆಗೊಂಡಿತು. ಗಣರಾಜ್ಯದ ಸಂವಿಧಾನವು ರಾಜಪ್ರಮುಖ ಹುದ್ದೆಯನ್ನು ಸೃಜಿಸಿತು. ಅದು ಮುಂದೆ ರಾಜ್ಯಪಾಲ ಹುದ್ದೆಯಾಯಿತು. ಹಾಗಾಗಿ, ಬೆಂಗಳೂರಿನಲ್ಲಿನ ರೆಸಿಡೆನ್ಸಿ ಆವರಣವನ್ನು ಅಲ್ಲಿಂದ ಮುಂದೆ ‘ರಾಜಭವನ’ ಎಂದು ಕರೆಯಲಾಯಿತು.

ರೆಸಿಡೆನ್ಸಿಯಿಂದ ರಾಜಭವನಕ್ಕೆ ಹೋಗುವ ಮಾರ್ಗವು ಸಾಕಷ್ಟು ದೀರ್ಘವಾಗಿದೆ. 110 ವರ್ಷಗಳ ಕಾಲಾವಧಿಯಲ್ಲಿ ಅನೇಕ ದಿಗ್ಗಜರು, ಸೇನಾ ನಾಯಕರು ಹಾಗೂ ಆಡಳಿತಗಾರರು ಈ ಮಾರ್ಗದಲ್ಲಿ ಹಾದು ಹೋಗಿದ್ದಾರೆ. ಶ್ರೀರಂಗಪಟ್ಟಣದ ಲಾಲ್‍ಬಾಗ್, ಇಲ್ವಾಲಾ ರೆಸಿಡೆನ್ಸಿ ಕಟ್ಟಡ, ಮೈಸೂರಿನ ಸರ್ಕಾರಿ ಭವನ ಹಾಗೂ ಪ್ರಸ್ತುತ ಬೆಂಗಳೂರಿನ ರಾಜಭವನ ಈ ಭವ್ಯ ಚರಿತ್ರೆಗೆ ಪ್ರಮುಖ ಸಾಕ್ಷಿಯಾಗಿ ನಿಂತಿವೆ.

ರೆಸಿಡೆನ್ಸಿ ಮತ್ತು ಅದರ ನವೀಕರಣಗಳು

 

ಈ ಹಿಂದೆ ‘ರೆಸಿಡೆನ್ಸಿ’ ಎಂದು ಉಲ್ಲೇಖಿಸಲಾಗುತ್ತಿದ್ದ ರಾಜಭವನವು ಮೂಲತಃ 92.3 ಎಕರೆ ಪ್ರದೇಶವನ್ನು ಒಳಗೊಂಡಿತ್ತು. ರೆಸಿಡೆನ್ಸಿ ಮೈದಾನವು ಎರಡು ಪ್ಲಾಟ್‍ಗಳನ್ನು ಒಳಗೊಂಡಿದೆ: ರೆಸಿಡೆನ್ಸಿ ಪಾರ್ಕ್‍ ರಸ್ತೆಯ ಪೂರ್ವದಲ್ಲಿ

ಕಟ್ಟಡಗಳನ್ನು ಒಳಗೊಂಡಿರುವ ಪ್ಲಾಟ್ 67.6 ಎಕರೆಗಳ ವಿಸ್ತೀರ್ಣವನ್ನುಹೊಂದಿದೆ ಹಾಗೂ ರೆಸಿಡೆನ್ಸಿ ಪಾರ್ಕ್ ರಸ್ತೆಯ ಪಶ್ಚಿಮಕ್ಕೆ ಇರುವ ಕಟ್ಟಡಗಳಿಲ್ಲದ ಪ್ಲಾಟ್ 24.7 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ.

ಕಾಲಾನಂತರದಲ್ಲಿ ಅನೇಕ ರೆಸಿಡೆಂಟರು ಮಾರ್ಕ್ ಕಬ್ಬನ್ ರವರು ನಿರ್ಮಿಸಿದ ಈ ರೆಸಿಡೆನ್ಸಿ ಕಟ್ಟಡವನ್ನು ಬದಲಾಯಿಸಿದರು, ಮಾರ್ಪಡಿಸಿದರು, ಸುಧಾರಿಸಿದರು ಹಾಗೂ ಸುಂದರವಾಗಿ ಕಾಣುವಂತೆ ಮಾಡಿದರು. ರಾಜಭವನವು ಪ್ರಾರಂಭದಲ್ಲಿ ಒಂದೇ ಅಂತಸ್ತಿನ ಕಟ್ಟಡವಾಗಿದ್ದು, ಇಡೀ ಪ್ಲಾಟ್‍ ಅತ್ಯಂತ ಎತ್ತರದ ಸ್ಥಳದಲ್ಲಿದೆ. ಮಾರ್ಕ್ ಕಬ್ಬನ್ ತರುವಾಯ ರೆಸಿಡೆಂಟ್‍ರು ತಮ್ಮ ಹೆಚ್ಚು ಬೇಡಿಕೆಯ ಅವಶ್ಯಕತೆಗಳಿಗೆ ಸರಿ ಹೊಂದುವಂತೆ ಅನೇಕ ಸೇರ್ಪಡೆಗಳನ್ನು ಮಾಡಿದ್ದಾರೆ. ಇದು, ಮೈಸೂರು ರಾಜ್ಯದ ಬ್ರಿಟಿಷ್ ರೆಸಿಡೆಂಟ್‍ರ ಅಧಿಪತ್ಯದಲ್ಲಿನ ಪ್ರದೇಶವಾಗಿದ್ದು, ಅವರು ನೇರವಾಗಿ ರಾಣಿಯ ಆಳ್ವಿಕೆಯಲ್ಲಿದ್ದ ವಸಾಹತುಗಳ ಮೇಲೆ ಅಧಿಪತ್ಯ ಸಾಧಿಸುವ ವಿಶೇಷಅವಕಾಶವನ್ನು ಹೊಂದಿದ್ದರು. ಆದ್ದರಿಂದ, ಕಟ್ಟಡದಅಲಂಕಾರ ಮತ್ತು ಘನತೆಯು ಇಡೀ ಭಾರತದಲ್ಲಿಯೇ ಅತಿಶಯವಾಗಿದೆ.

1874ರಲ್ಲಿ ಮುಂದೆ ಕಿಂಗ್ ಎಡ್ವರ್ಡ್‍ VIIಎನಿಸಿಕೊಂಡ ಪ್ರಿನ್ಸ್‍ ಆಫ್ ವೇಲ್ಸ್ ಭಾರತಕ್ಕೆ ಭೇಟಿ ನೀಡಿದಾಗ ಬಾಲ್‍ ರೂಮ್‍ ಅನ್ನು ನಿರ್ಮಿಸಲಾಯಿತು. ರಾಜಕುಮಾರನನ್ನು ಹಡಗಿನಲ್ಲಿ ಭಾರತಕ್ಕೆ ಕರೆತಂದ ನಂತರ ಅದಕ್ಕೆ ‘ಸೆರಾಪಿಸ್‍ ಕೋಣೆ’ ಎಂದು ಹೆಸರಿಡಲಾಯಿತು. ದೊಡ್ಡದಾದ ಕಿಟಕಿಗಳನ್ನು ಹಾಕಲಾಯಿತು ಮತ್ತು ಬಿಳಿ ಹಾಗೂ ಚಿನ್ನದ ಬಣ್ಣದಲ್ಲಿ ಪೇಂಟ್‍ ಮಾಡಲಾಯಿತು. ಅದೇ ಸಮಯದಲ್ಲಿ ದರ್ಬಾರ್‍ ಹಾಲ್ ಅನ್ನೂ ಸಹ ಕೆಂಪು ಮತ್ತು ಚಿನ್ನದ ಬಣ್ಣದ ವಸ್ತುಗಳಿಂದ ಮರುರೂಪಿಸಲಾಯಿತು.

ಈ ಅವಧಿಯಲ್ಲಿ ಒಂದು ಬಿಲಿಯರ್ಡ್ಸ್ ಟೇಬಲ್ ಅನ್ನು ಸಹ ಖರೀದಿಸಲಾಯಿತು. 1909ರಲ್ಲಿ ಸರ್‍ ಸ್ಟುವರ್ಟ್‍ ಮಿಟ್‍ಪೋರ್ಡ್‍ ಫ್ರೇಸರ್‍ ರೆಸಿಡೆಂಟರಾಗಿದ್ದಾಗ, 81 ಪಯೋನಿಯರ್ಸ್‍ ರೆಜಿಮೆಂಟ್ ಬರ್ಮೀಸ್ ಗಂಟೆಯೊಂದನ್ನು ಕಾಣಿಕೆ ನೀಡಿತು. ತರುವಾಯ ಅದನ್ನು ರೆಸಿಡೆನ್ಸಿಯಲ್ಲಿ ಹಾಕಲಾಯಿತು. ಆದರೆ, ಆ ಗಂಟೆಯನ್ನು ಸುಮಾರು 1927ರಲ್ಲಿ ಸುರಂಗದ ಕೆಲಸಗಾರರು ಮತ್ತು ಗಣಿಗಾರಿಕೆಯ ಕೆಲಸಗಾರರು ತೆಗೆದುಕೊಂಡು ಹೋದರು ಎಂದು ದಾಖಲೆಗಳಲ್ಲಿ ಕಂಡುಬರುತ್ತದೆ.

ಸರ್‍ ಸ್ಟುವರ್ಟ್‍ ಮಿಟ್‍ಫೋರ್ಡ್‍ ಫ್ರೇಸರ್‍ ರೆಸಿಡೆಂಟರಾಗಿದ್ದಾಗ, ವೇಲ್ಸ್ ರಾಜಕುಮಾರನ ವಾಸ್ತವ್ಯಕ್ಕಾಗಿ ವಿಸ್ತಾರವಾದ ಮಾರ್ಪಾಡುಗಳನ್ನು ಮಾಡಲಾಯಿತು ಮತ್ತು ಕಟ್ಟಡವನ್ನು ಮರು ಅಲಂಕರಿಸಲಾಯಿತು ಮತ್ತು

 

ನವೀಕರಿಸಲಾಯಿತು. ಈ ಅವಧಿಯಲ್ಲಿ ಕಟ್ಟಡದ ವಿದ್ಯುದೀಕರಣವನ್ನು ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾಯಿತು. 1906ರ ಫೆಬ್ರವರಿಯಲ್ಲಿ ರಾಜಕುಮಾರನು ಬೆಂಗಳೂರಿಗೆ ಭೇಟಿ ನೀಡಿದ್ದರು ಮತ್ತು ರೆಸಿಡೆನ್ಸಿಯಲ್ಲಿ ಉಳಿದಿದ್ದರು.

1895-96ರಲ್ಲಿ ಸರ್‍ ವಿಲಿಯಂ ಮ್ಯಾಕ್‍ವರ್ತ್‍ ಅವರು ರೆಸಿಡೆಂಟ್‍ರಾಗಿದ್ದಾಗ ಕಾವಲು ಕೊಠಡಿಯನ್ನು ಸೇರ್ಪಡೆಗೊಳಿಸಲಾಯಿತು. ಒಂದು ಕುಬ್ಜ ಗೋಡೆ ಮತ್ತು ಮುಖ್ಯ ಗೇಟ್‍ನಿಂದ ಜನರಲ್ ಪೋಸ್ಟ್‍ಆಫೀಸ್‍ ಕಡೆಗೆ “ಬಾಲೂಸ್‍ ಟ್ರೇಡ್‍” (ಹಳೆಯ ಎರಕಹೊಯ್ದ ಕಬ್ಬಿಣದ ಬೇಲಿ) ಅನ್ನು ಸ್ಥಾಪಿಸಲಾಯಿತು. ಕರ್ನಲ್‍ ಸರ್ ಡೋನಾಲ್ಡ್‍ ರಾಬರ್ಟ್‍ಸನ್‍ ರೆಸಿಡೆಂಟರಾಗಿದ್ದಾಗ ಸೇವಕರಿಗೆ ತಾತ್ಕಾಲಿಕ ಗುಡಿಸಲುಗಳನ್ನು ಹಾಕಲಾಯಿತು. ನಂತರ ಅವುಗಳನ್ನು ಸರ್‍ ಹ್ಯಗ್‍ ಡಾಲಿ ಅವರು ಪಕ್ಕಾ ಕಟ್ಟಡಗಳಾಗಿ ಪರಿವರ್ತಿಸಿದರು. ಡಾಲಿ ಅವರು ನೃತ್ಯ ಸಭಾಂಗಣದ ಮೇಲ್ಛಾವಣಿಯನ್ನು ಎತ್ತರಿಸಿದರು ಮತ್ತು ಹಳೆಯ ಕಬ್ಬನ್‍ ಅಸೆಂಬ್ಲಿ ಕೊಠಡಿಗಳು ಮತ್ತು ನ್ಯಾಯಾಲಯಗಳ ವಸ್ತುಗಳನ್ನು ಬಳಸಿಕೊಂಡು ಬೋರ್ಡ್‍ಗಳಿಂದ ನೆಲಹಾಸನ್ನು ಅಳವಡಿಸಿದರು. ಮೇಲ್ಛಾವಣಿಗೆ ಮೆಟ್ಟಿಲುಗಳ ಸಾಲನ್ನು ನಿರ್ಮಿಸಲಾಯಿತು. ಹಳೆಯ ಉಗ್ರಾಣವನ್ನು ತೇಗದ ಮರಗಳಿಂದ ಪ್ರಸ್ತುತ ಇರುವ ಊಟದ ಕೋಣೆಯಾಗಿ ಪರಿವರ್ತಿಸಲಾಯಿತು. ಸಂಕೀರ್ಣವಾಗಿ ಕೆತ್ತಿದ ಅಥವಾ ಚಿತ್ರಿಸಿದ ಅಲಂಕಾರ ವಿಶಾಲ ಸಮತಲವಾದ ಚಿತ್ರ ಮತ್ತು ಬಣ್ಣದ ಡಾರ್ಮರ್‍ ದೀಪಗಳನ್ನು ಮಿಸ್ಟರ್‍ ಕಾಬ್‍ (1916-1920)ರ ಅವಧಿಯಲ್ಲಿ ಸೇರಿಸಲಾಯಿತು. ಎಡಭಾಗದಲ್ಲಿ ಸಣ್ಣ ಹಜಾರ ಮತ್ತು ಮುಖ ಮಂಟಪವನ್ನು ಸಹ ನಿರ್ಮಿಸಲಾಯಿತು.

ಸರ್‍ ವಿಲಿಯಂ ಬಾರ್ಟನ್ ರೆಸಿಡೆಂಟ್‍ರಾಗಿದ್ದಾಗ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಯಿತು. ಆದಾಗ್ಯೂ, ಎಸ್‍.ಇ. ಪಿಯರ್ಸ್‍ (1925-1930) ಇವರು ರೆಸಿಡೆಂಟರಾಗಿದ್ದ ಸಮಯದಲ್ಲಿ ಹೆಚ್ಚು ವಿಸ್ತರಿತ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಮುಖ್ಯ ಕಟ್ಟಡದ ಪ್ರವೇಶದ್ವಾರದಲ್ಲಿ ಸೂಕ್ತವಾದ ಮುಖಮಂಟಪವನ್ನು ನಿರ್ಮಿಸುವುದು ಸಹ ಇದರಲ್ಲಿ ಒಳಗೊಂಡಿದೆ. ಪ್ರಸ್ತುತ ವಿಶ್ರಾಂತಿ ಕೋಣೆಯಾಗಿರುವ ದರ್ಬಾರ್‍ ಹಾಲ್‍ನ ಸಂಪೂರ್ಣ ಮೇಲ್ಛಾವಣಿ ತುಂಬಾ ಕಡಿಮೆ ಎತ್ತರದಲ್ಲಿದ್ದು ದೋಷಯುಕ್ತವಾಗಿತ್ತು. ಎತ್ತರಿಸಿದ ಗೋಡೆಗಳ ಮೇಲೆ ಅದನ್ನು ಪುನಃ ಎತ್ತರಕ್ಕೆ ಹೆಚ್ಚಿಸಲಾಯಿತು. ನೃತ್ಯ ಸಭಾಂಗಣವನ್ನು ಅಚ್ಚುಗಳು ಸುತ್ತಿನ ತೆರೆಯುವಿಕೆಗಳು ಮತ್ತು ವಿಶೇಷವಾದ ಕೆಳ ಛಾವಣಿ ಹಾಗೂ ಮೇಲ್ಛಾವಣಿಗಳಿಂದ ಕಂಗೊಳಿಸುವಂತೆ ಮಾಡಲಾಯಿತು.

ಬಹಳ ಸಮಯದ ನಂತರ, 1967ರಲ್ಲಿ ವಿ.ವಿ. ಗಿರಿ ಮತ್ತು ಜಿ.ಎಸ್‍ ಪಾಠಕ್ ಅವರ ಅಧಿಕಾರಾವಧಿಯಲ್ಲಿ ವಾಸ್ತುಶಿಲ್ಪವನ್ನು ಪರಿಪೂರ್ಣವಾಗಿ ಹಳೆಯ ವಾಸ್ತುಶಿಲ್ಪದೊಂದಿಗೆಸಂಯೋಜಿಸುವ ಮೂಲಕ ಮೊದಲನೇ ಮಹಡಿಯನ್ನು ರಾಜಭವನ ಕಟ್ಟಡಕ್ಕೆ ಸೇರಿಸಲಾಯಿತು. ಆ ಸಂಯೋಜನೆ ಎಷ್ಟು ಪರಿಪೂರ್ಣವಾಗಿದೆ ಎಂದರೆ, ಅದು ಮೊದಲನೇ ಮಹಡಿ ಮೊದಲಿನಿಂದಲೂ ಇದೆಯೇನೋ ಎನ್ನುವಂತೆ ತೋರುತ್ತದೆ. ಇದನ್ನು ರಾಜ್ಯಪಾಲರ ನಿವಾಸವನ್ನಾಗಿ ಮಾಡಲಾಯಿತು.

ಇತ್ತೀಚೆಗೆ, 1994-95ರ ಅವಧಿಯಲ್ಲಿ ರಾಜ್ಯಪಾಲರಾದ ಖುರ್ಷೇದ್‍ ಅಲಂ ಖಾನ್‍ ಅವರ ಉಪಕ್ರಮದಲ್ಲಿ ಹಲವು ಮಾರ್ಪಾಡುಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಲಾಯಿತು. 153 ವರ್ಷಗಳಷ್ಟು ಹಳೆಯದಾದ ಮುಖ್ಯ ಕಟ್ಟಡವನ್ನು ಬಲಪಡಿಸುವುದರ ಜೊತೆಗೆ, ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲಾಯಿತು. ಮದ್ರಾಸ್‍ ಟೆರೇಸ್‍ ಮೇಲ್ಛಾವಣಿಯಿಂದ ಸಮತಲವಾದ ಆರ್‍ಸಿಸಿ ಛಾವಣಿಗೆ ಬದಲಾಯಿಸಲಾಯಿತು. ರಾಜ್ಯಪಾಲರಾದ ಶ್ರೀಮತಿ ರಮಾದೇವಿ ಅವರ ಆಸಕ್ತಿಯಿಂದ ಬ್ಯಾಂಕ್ವೆಟ್‍ ಹಾಲ್‍ನ್ನು ಸೊಗಸಾಗಿ ನವೀಕರಿಸಲಾಗಿದೆ ಮತ್ತು ರಾಜಭವನದ ಉದ್ಯಾನಕ್ಕೆ ಗಾಜಿನಮನೆಯನ್ನು ಸೇರ್ಪಡೆಗೊಳಿಸಲಾಗಿದೆ.

ಇಂದಿನ ರಾಜಭವನವು, ಹಾಲು ಬಿಳಿ ಬಣ್ಣದಲ್ಲಿನಿರ್ಮಿಸಲಾದ ನಿರ್ಮಲ ಭವ್ಯ ರಚನೆಯಾಗಿದೆ. ಹಲವು ವರ್ಷಗಳ ಕಾಲಾವಧಿಯಲ್ಲಿ ಆದ ಎಲ್ಲಾ ಬದಲಾವಣೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಮತ್ತು ಇದು ಇನ್ನೂ ತನ್ನ ಪುರಾತನವಾದ ವಿಶ್ವ ಪರಂಪರೆಯನ್ನು ಮತ್ತು ಘನತೆಯನ್ನು ಉಳಿಸಿಕೊಂಡಿದೆ. ಈ ಬದಲಾವಣೆಗಳು ಈ ಮಹಲಿನಲ್ಲಿ ಸಾಮರಸ್ಯದಿಂದ ಬೆರೆತು, ಕಾಲಮಿತಿಯನ್ನು ಮೀರಿದ, ಅತೀಂದ್ರಿಯವಾದ ನೋಟವನ್ನು ನೀಡುತ್ತಿವೆ.

ರೆಸಿಡೆನ್ಸಿಯ ಗೌರವಾನ್ವಿತ ಅತಿಥಿಗಳು

ಕಳೆದು ಹೋದ ಯುಗದ ಅನೇಕ ಮಹಾನ್ ವ್ಯಕ್ತಿಗಳು ಅತಿಥಿಗಳಾಗಿ ರೆಸಿಡೆನ್ಸಿಗೆ ಭೇಟಿ ನೀಡಿ ಉಳಿದುಕೊಂಡಿದ್ದಾರೆ. ಕಬ್ಬನ್‍ರ ಅವಧಿಯಲ್ಲಿ ಲಾರ್ಡ್‍ ಮಕಾಲೆಯವರು ಇಲ್ಲಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ತಂಗಿದ್ದರು. 1868ರ ಡಿಸೆಂಬರ್ ಮೊದಲ ವಾರದಲ್ಲಿ ಶೃಂಗೇರಿಯ ಗುರೂಜಿಯವರು ರೆಸಿಡೆನ್ಸಿಗೆ ಭೇಟಿ ನೀಡಿದ್ದು, ಬೌರಿಂಗ್ ರವರು ಅವರಿಗೆ ಹುಲ್ಲುಹಾಸಿನ ಸ್ವಾಗತ ನೀಡಿದ್ದರು.

ಇಂಗ್ಲೆಂಡಿನ ರಾಜ ಮತ್ತು ಭಾರತದ ಚಕ್ರವರ್ತಿ ಕೂಡ ಇಲ್ಲಿ ತಂಗಿದ್ದರು. ಗವರ್ನರ್‍ ಜನರಲ್ ನಂತರದ ಭಾರತದ ವೈಸರಾಯ್‍ರವರು ಸಹ ಈ ಕಟ್ಟಡದಲ್ಲಿ ಉಳಿದಿದ್ದರು. ಲಾರ್ಡ್‍ ಡಾಲ್‍ಹೌಸಿ 1855ರ ನವೆಂಬರ್ 3 ರಿಂದ 5ರ ವರೆಗೆ ಮೂರು ದಿನಗಳ ಕಾಲ ಇಲ್ಲಿ ಉಳಿದಿದ್ದರು. 1886ರ ಡಿಸೆಂಬರ್ ಅವಧಿಯಲ್ಲಿ ಲಾರ್ಡ್‍ ಡಫರಿನ್ ಮತ್ತು ಲೇಡಿ ಡಫರಿನ್ ಇಲ್ಲಿನ ಅತಿಥಿಗಳಾಗಿ ಬಂದಿದ್ದರು.

1889ರ ನವೆಂಬರ್ 29ರ ಶುಕ್ರವಾರದಂದು ಮೊದಲ ಬಾರಿಗೆ ಸಾಮ್ರಾಜ್ಯಶಾಹಿ ಕುಟುಂಬದ ಸದಸ್ಯರಾಗಿದ್ದ ಹಿಸ್‍ ರಾಯಲ್ ಹೈನೆಸ್‍ ಪ್ರಿನ್ಸ್ ಆಫ್ ವೇಲ್ಸ್‍ ಆಲ್ಬರ್ಟ್‍ ವಿಕ್ಟರ್‍ ರವರು ಬೆಂಗಳೂರಿಗೆ ಭೇಟಿ ನೀಡಿದರು.

1906ರ ಫೆಬ್ರವರಿ 05 ಮತ್ತು 06 ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ವೇಲ್ಸ್‍ನ ರಾಜಕುಮಾರಿ ಮತ್ತು ರೆಸಿಡೆನ್ಸಿಯಲ್ಲಿ ತಂಗಿದ್ದರು.

ಅಲ್ಲದೆ, ಈ ನಿವಾಸ ಗೃಹದಲ್ಲಿ ಕಿಂಗ್ ಎಡ್ವರ್ಡ್‍ ಮತ್ತು ಅವರ ಪುತ್ರ ಸಾಕಷ್ಟು ಮನರಂಜನೆಯನ್ನು ಪಡೆದರು. ಎಲ್ಲರೂ ಒಟ್ಟಾಗಿ ಸೇರಿ ಅವರ ಸಾರ್ವಭೌಮತೆಯ ಆರೋಗ್ಯದ ಪೇಯವನ್ನು ಕುಡಿದು ಆನಂದಿಸಿದರು, ಅವರ ವಾಸ್ತವ್ಯಕ್ಕಾಗಿ ಗೋಡೆಗಳನ್ನು ಎತ್ತರಿಸಲಾಗಿತ್ತು.

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಗಳಿಸಿದ ನಂತರ, ಬೆಂಗಳೂರಿನ ರೆಸಿಡೆನ್ಸಿಯನ್ನು ‘ರಾಜಭವನ’ ಎಂದು ಘೋಷಿಸಲಾಯಿತು. ಎಂದರೆ, ಭಾರತದ ಗವರ್ನರ್‍ ಜನರಲ್ ರವರ ಪ್ರತಿನಿಧಿಯಾದ ಗವರ್ನರ್‍ ಅರ್ಥಾತ್‍ ರಾಜ್ಯಪಾಲರ ಬಂಗಲೆ. ಮೈಸೂರಿನ ಹಿಂದಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರನ್ನು ರಾಜಪ್ರಮುಖ (ರಾಜಪಾಲ)ರನ್ನಾಗಿ ನೇಮಿಸಲಾಯಿತು. ಆದರೆ, ಒಡೆಯರ್‍ ಅವರು ಈ ಬಂಗಲೆಯಲ್ಲಿ ಎಂದೂ ವಾಸ ಮಾಡಲಿಲ್ಲ. ಏಕೆಂದರೆ ಅವರು ಬೆಂಗಳೂರಿನಲ್ಲಿ ಇಂಗ್ಲೆಂಡ್‍ನ ವಿಂಡ್ಸರ್‍ ಕ್ಯಾಸಲ್‍ನ ಪ್ರತಿರೂಪವಾದ ಸ್ವಂತ ಅರಮನೆಯನ್ನು ಹೊಂದಿದ್ದರು. ಜಯಚಾಮರಾಜ ಒಡೆಯರ್ ಅವರು ಮದ್ರಾಸ್ ಗವರ್ನರ್ ಆಗಿ ನೇಮಕಗೊಂಡ ನಂತರ ಮೈಸೂರು ರಾಜ್ಯಪಾಲರ ಹುದ್ದೆಯನ್ನು ತ್ಯಜಿಸಿದ 1964ನೇ ಇಸವಿಯವರೆಗೆ ರಾಜಭವನವು ಖಾಲಿಯಾಗಿ ಉಳಿದಿತ್ತು. ಆನಂತರ ಶ್ರೀ ಜನರಲ್ ನಾಗೇಶ್ ಅವರು ಉತ್ತರಾಧಿಕಾರಿಯಾಗಿ ರಾಜ್ಯಪಾಲರ ಪದವನ್ನು ವಹಿಸಿಕೊಂಡ ನಂತರ ರಾಜಭವನವು ಭರ್ತಿಯಾಯಿತು. ಅಂದಿನಿಂದ ಎಲ್ಲಾ ರಾಜ್ಯಪಾಲರು ಈ ಭವ್ಯವಾದ ಕಟ್ಟಡದಲ್ಲಿ ಉಳಿದುಕೊಂಡಿದ್ದಾರೆ.

ಸ್ವಾತಂತ್ರ್ಯೋತರ ಯುಗ:

 

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು 1947ರ ಆಗಸ್ಟ್ 15ರಂದು ಕೊನೆಗೊಂಡಿತು. ಇದರೊಂದಿಗೆ ಬೆಂಗಳೂರಿನಲ್ಲಿ ರೆಸಿಡೆನ್ಸಿ ಹುದ್ದೆಯ ಅಸ್ತಿತ್ವವು ನಿಂತುಹೋಯಿತು ಮತ್ತು ಭಾರತದಲ್ಲಿನ ಎಲ್ಲ ಬ್ರಿಟಿಷ್ ರೆಸಿಡೆಂಟ್‍ರನ್ನು ಹಿಂದಕ್ಕೆ ಕರೆಸಿಕೊಳ‍್ಳಲಾಯಿತು. ಆದರೆ, ‘ರೆಸಿಡೆನ್ಸಿ’ ಎಂಬ ಹೆಸರು ಸುಮಾರು 15 ವರ್ಷಗಳ ಕಾಲ ಹಾಗೇ ಉಳಿಯಿತು.

 

ತರುವಾಯ, ಮಹಾರಾಜರನ್ನು ರಾಜ್ಯದ ರಾಜಪ್ರಮುಖರಾಗಿ ನೇಮಿಸಲಾಯಿತು. ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಭವ್ಯವಾದ ಅರಮನೆಗಳನ್ನು ಹೊಂದಿದ್ದರಿಂದ, ರಾಜಪ್ರಮುಖರು ವಾಸಿಸಲು ರೂಪಿಸಲಾಗಿದ್ದ ರೆಸಿಡೆನ್ಸಿಯ ಹೊಸ ವ್ಯವಸ್ಥೆಯಲ್ಲಿ ಅವರು ಉಳಿಯಲು ಬಯಸಲಿಲ್ಲ. ಆದ್ದರಿಂದ, ಸರ್ಕಾರವು ರೆಸಿಡೆನ್ಸಿಯನ್ನು ರಾಜ್ಯಅತಿಥಿಗೃಹವನ್ನಾಗಿ ಮಾಡಿತ್ತು.

ರೆಸಿಡೆನ್ಸಿಯ ಸೇವಾ ಸಿಬ್ಬಂದಿಯನ್ನು ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಖಾಯಂಗೊಳಿಸಲಾಯಿತು. ಅನಂತರ, ಭಾರತದ ರಾಷ್ಟ್ರಪತಿಗಳು ಮತ್ತು ಉಪರಾಷ್ಟ್ರಪತಿಗಳು, ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಮುಂತಾದ ರಾಜ್ಯದ ಅತಿಥಿಗಳು ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತಿದ್ದರು.

ರೆಸಿಡೆನ್ಸಿ ಕಟ್ಟಡದ ಮುಂಭಾಗದಲ್ಲಿರುವ ಹುಲ್ಲು ಹಾಸಿನ ಮೇಲೆ ಅಥವಾ ಬಾಲ್ ರೂಮ್‍ನಲ್ಲಿ ಮುಖ್ಯಮಂತ್ರಿಗಳು ಹಲವಾರು ಆತಿಥ್ಯಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದರು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ರಾಜಪ್ರಮುಖರು (ಅನಂತರ ರಾಜ್ಯಪಾಲರು) ಆತಿಥ್ಯಕೂಟಗಳನ್ನು ತಮ್ಮ ಅರಮನೆಯ ಟೆನಿಸ್‍ ಮೈದಾನದಲ್ಲಿ ಆಯೋಜಿಸುತ್ತಿದ್ದರು. ಪ್ರಸ್ತುತ ಈ ಆತಿಥ್ಯಕೂಟಗಳನ್ನು ರಾಜಭವನದ ಹುಲ್ಲುಹಾಸಿನ ಮೇಲೆ ಆಯೋಜಿಸಲಾಗುತ್ತಿದೆ.

1947ರಲ್ಲಿ ಕಾಂಗ್ರೆಸ್‍ ಮಂತ್ರಿಮಂಡಲ ರಚನೆಯಾದ ನಂತರ, ರೆಸಿಡೆನ್ಸಿಯ ಬಾಲ್‍ ರೂಮ್‍ನಲ್ಲಿ ಕಾಂಗ್ರೆಸ್‍ ಪಕ್ಷದ ಹಲವಾರು ಶಾಸಕಾಂಗ ಸಭೆಗಳು ನಡೆದವು. ಆಗ ವಿಧಾನಸೌಧ ಹಾಗೂ ಶಾಸಕರ ಭವನ ಇನ್ನೂ ನಿರ್ಮಾಣವಾಗಿರಲಿಲ್ಲ. ಶಾಸಕರಿಗೆ ರಾಜ್ಯದ ಅತಿಥಿಗೃಹಗಳಾದ ‘ಸುದರ್ಶನ’, ‘ಕಾರ್ಲ್‍ಟನ್ ಹೌಸ್’, ‘ಕುಮಾರ ಕೃಪ’, ಮತ್ತಿತರ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು. ವಿಧಾನಮಂಡಲ ಅಧಿವೇಶನಗಳ ಸಂದರ್ಭಗಳಲ್ಲಿ ಕೆಲವು ಆಯ್ದ ಶಾಸಕರಿಗೆ ಮಾತ್ರ ರೆಸಿಡೆನ್ಸಿಯಲ್ಲಿ ವಸತಿ ವ್ಯವಸ್ಥೆ ನೀಡಲಾಗುತ್ತಿತ್ತು.

ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಿ. ದೇವರಾಜ್ ಅರಸು, ಎ.ಭೀಮಪ್ಪ ನಾಯಕ, ಅಂದಿನ ಉಪಸಭಾಪತಿ ಆರ್‍. ಚೆನ್ನಿಗರಾಮಯ್ಯ, ಅಂದಿನ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಹಾಗೂ ಇತರ ಗಣ್ಯ ವ್ಯಕ್ತಿಗಳಿಗೆ ರೆಸಿಡೆನ್ಸಿಯಲ್ಲಿ ವಸತಿ ಕಲ್ಪಿಸಲಾಗಿತ್ತು. ಅಂದಿನ ಹಣಕಾಸು ಸಚಿವರಾಗಿದ್ದ ಹೆಚ್. ದಾಸಪ್ಪ ಮತ್ತು ನ್ಯಾಯಮೂರ್ತಿ ಪಿ. ಮೇದಪ್ಪಅವರು ಸಂಜೆ ಕಚೇರಿ ಅವಧಿ ಮುಗಿದ ನಂತರ ಸಂಜೆಯ ಹೊತ್ತು ಇಲ್ಲಿ ಬಿಲಿಯರ್ಡ್ಸ್ ಆಡುತ್ತಿದ್ದರು. ಕಾರ್ಯಕಾರಿ ಸಮಿತಿ ಸಭೆಯು ಗ್ರಂಥಾಲಯದಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ಸಭೆಗಳು ರೆಸಿಡೆನ್ಸಿಯ ಬಾಲ್ ‍ರೂಮ್‍ ನಲ್ಲಿ ನಡೆಯುತ್ತಿದ್ದವು.

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ರೆಸಿಡೆನ್ಸಿಯಲ್ಲಿ ಹಲವು ಉತ್ಸಾಹಭರಿತ ಮತ್ತು ಸಂತೋಷಕರವಾದ ಆತಿಥ್ಯಕೂಟಗಳು ನಡೆಯುತ್ತಿದ್ದವು. ಅಂಥ ಒಂದು ಪ್ರಮುಖ ಸಂದರ್ಭವೆಂದರೆ ಮಿರ್ಜಾ ಇಸ್ಮಾಯಿಲ್‍ ಅವರಿಗೆ ನೀಡಿದ ಬೀಳ್ಕೊಡುಗೆ ಕಾರ್ಯಕ್ರಮವಾಗಿತ್ತು. ಆ ದಿನಗಳಲ್ಲಿ, ಅರಮನೆಯ ಆರ್ಕೆಸ್ಟ್ರಾ ತಂಡ ಆತಿಥ್ಯಕೂಟಗಳಲ್ಲಿ ಭಾಗವಹಿಸುತ್ತಿತ್ತು.

ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ದೇಶದೊಳಗಿನ ಮತ್ತು ವಿದೇಶಗಳ ಬದುಕಿನ ಎಲ್ಲಾ ಹಂತಗಳಲ್ಲಿ ಶ್ರೇಷ್ಟರು ಮತ್ತು ಪ್ರತಿಷ್ಠಿತರು ಆದ ವ್ಯಕ್ತಿಗಳು ರಾಜ್ಯದ ಅತಿಥಿಗಳಾಗಿ ರೆಸಿಡೆನ್ಸಿಯಲ್ಲಿ ಉಳಿದಿದ್ದಾರೆ. ಇಲ್ಲವೇ ಭೇಟಿ ನೀಡಿದ್ದಾರೆ. ರೆಸಿಡೆನ್ಸಿಯಲ್ಲಿ ಉಳಿದಿದ್ದ ರಾಷ್ಟ್ರಮಟ್ಟದ ನಾಯಕರೆಂದರೆ, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್‍ ವಲ್ಲಭಾಯ್‍ ಪಟೇಲ್, ಮೌಲಾನ್ ಅಬ್ದುಲ್ ಕಲಾಂ ಆಜಾದ್, ಡಾ. ಶ‍್ಯಾಮ್ ಪ್ರಸಾದ್ ಮುಖರ್ಜಿ, ಡಾ. ಜಾಕಿರ್‍ ಹುಸೇನ್ ಮತ್ತು ಡಾ. ರಾಜಕುಮಾರಿ ಅಮೃತಾ ಕೌರ್ ಅಲ್ಲದೆ ಹಲವಾರು ಕೇಂದ್ರ ಮಂತ್ರಿಗಳು ಮತ್ತು ರಾಜ್ಯಪಾಲರುಗಳು ರೆಸಿಡೆನ್ಸಿಯಲ್ಲಿ ತಂಗಿದ್ದಾರೆ.

ವಿದೇಶದಿಂದ ಬಂದ ಅತಿಥಿಗಳಲ್ಲಿ, ಅಂದಿನ ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್‍ವೆಲ್ಟ್‍ ಅವರ ಪತ್ನಿ ಎಲೀನರ್‍ ಅವರು ಭಾರತದ ರಾಜ್ಯ ಪ್ರವಾಸದಲ್ಲಿದ್ದಾಗ ಇಲ್ಲಿಯೇ ತಂಗಿದ್ದರು. 1947 ರಿಂದ 1964ರ ವರೆಗೆ ಭಾರತದ ಪ್ರಧಾನಿಯಾಗಿದ್ದ

 

ಪಂಡಿತ್ ಜವಾಹರ್‍ಲಾಲ್ ನೆಹರು ಅವರು ಯಾವಾಗಲೂ ಮೈಸೂರು ಮಹಾರಾಜರಾದ ಜಯಚಾಮರಾಜ್ ಒಡೆಯರ್ ರವರ ಅತಿಥಿಯಾಗಿ ಬೆಂಗಳೂರು ಅರಮನೆಯ ರಾಯಲ್ ಕಾಟೇಜ್‍ನಲ್ಲಿ ತಂಗುತ್ತಿದ್ದರು. ಒಂದು ಸ್ಮರಣೀಯ ಸಂದರ್ಭದಲ್ಲಿ ಅವರು ರೆಸಿಡೆನ್ಸಿಗೆ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಬಾಲ್ ರೂಮ್‍ನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‍ ಅವರೂ ಕೂಡ ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿ ಮಾತನಾಡಿದರು.

ಮತ್ತೊಂದು ಸ್ಮರಣೀಯ ಸಂದರ್ಭವೆಂದರೆ, ಭಾರತ ಗಣರಾಜ್ಯದ ಪ್ರಥಮ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ರವರು ಮೈಸೂರು ರಾಜ್ಯಕ್ಕೆ ಭೇಟಿ ನೀಡಿದಾಗ, ರೆಸಿಡೆನ್ಸಿಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿ, ರೆಸಿಡೆನ್ಸಿ ಕಟ್ಟಡದ ಮುಂಭಾಗದಲ್ಲಿ ರಾಷ್ಟ್ರಪತಿಗಳ ಜತೆ ಎಲ್ಲ ಸಚಿವರು ಇರುವ ಛಾಯಾಚಿತ್ರ ತೆಗೆಯಲಾಯಿತು.

ಜಯಚಾಮರಾಜ ಒಡೆಯರ್ ಅವರು ಮದ್ರಾಸ್ ರಾಜ್ಯದ ಗವರ್ನರ್ ಆಗಿ ನೇಮಕಗೊಂಡಾಗ, ರೆಸಿಡೆನ್ಸಿಯ ನಿವಾಸಿಯಾಗಿ ಮೈಸೂರು ರಾಜ್ಯದ ಹೊಸ ರಾಜ್ಯಪಾಲರು ಆಗಮಿಸಿದರು. ಅಂದಿನಿಂದ ರೆಸಿಡೆನ್ಸಿಯು ಅತಿಥಿಗೃಹವಾಗಿರುವುದು ಕೊನೆಗೊಂಡಿತು. ರೆಸಿಡೆನ್ಸಿ ಕಟ್ಟಡವು ರಾಜ್ಯಪಾಲರ ನಿವಾಸವಾದ ರಾಜಭವನವಾಗಿ ಪರಿವರ್ತಿತವಾದ ನಂತರ ರೆಸಿಡೆನ್ಸಿ ಕಟ್ಟಡದ ಉದ್ದೇಶ, ಸ್ವರೂಪ ಮತ್ತು ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಬದಲಾವಣೆಗೊಂಡವು.

ಹೀಗೆ, ಸುದೀರ್ಘವಾದ ಮತ್ತು ವಿಶಿಷ್ಟವಾದ ಇತಿಹಾಸವನ್ನು ಹೊಂದಿರುವ ರೆಸಿಡೆನ್ಸಿಯು ಕಾಲಕಾಲಕ್ಕೆ ಉಂಟಾದ ರಾಜಕೀಯ ವಿಪ್ಲವಗಳಿಗೆ ತುತ್ತಾಗದೆ ಬಂಡೆಯಂತೆ ಸ್ಥಿರವಾಗಿ ನಿಂತಿದ್ದು, ಇದು ಬ್ರಿಟಿಷ್ ಅಧಿಪತ್ಯದ ಮತ್ತು ಸಾಮ್ರಾಜ್ಯಶಾಹಿಯ ಅಧಿಕೃತ ಸಂಕೇತವಾಗಿ ಉಳಿದಿದೆ. ಈಗ, ಇದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಕೇಂದ್ರ ಸ್ಥಾನವಾಗಿದೆ. ಈ ರಾಜಭವನ ಕಟ್ಟಡವು ಎಂದಿಗೂ ತನ್ನ ಭವ್ಯತೆ ಅಥವಾ ಸೌಂದರ್ಯವನ್ನು ಕಳೆದುಕೊಳ್ಳದೆ ಅಧಿಕಾರದ ಸಂಕೇತವಾಗಿ ಉಳಿದು ಕೊಂಡಿದೆ.

 

 

ರೆಸಿಡೆಂಟರುಗಳ ಪಟ್ಟಿ

ರೆಸಿಡೆಂಟರು 1799 ರಿಂದ 1842ರ ವರೆಗೆ

ಕರ್ನಲ್. ಸರ್‍ ಬ್ಯಾರಿ ಕ್ಲೋಸ್

22 ಜುಲೈ 1799 ರಿಂದ ಮಾರ್ಚ್‍ 1801

ವೆಬ್. ಜೋಶಿಯಾ ಎಂ.ಸಿ.ಎಸ್‍

31 ಮಾರ್ಚ್‍ 1801 ರಿಂದ 1 ಫೆಬ್ರವರಿ 1803

ವೆಬ್. ಜೋಶಿಯಾ ಎಂ.ಸಿ.ಎಸ್‍

23 ಅಕ್ಟೋಬರ್ 1803 ರಿಂದ 1 ಫೆಬ್ರವರಿ 1804

ಕರ್ನಲ್‍ ಮಾರ್ಕ್ ವಿಲ್ಕ್ಸ್‍

ಏಪ್ರಿಲ್ 1804 ರಿಂದ ನವೆಂಬರ್ 1804

ಮಾಲ್ಕಮ್‍, ಸರ್‍ ಜಾನ್

ನವೆಂಬರ್ 1804 ರಿಂದ ಮಾರ್ಚ್‍ 1805

ಮಾಲ್ಕಮ್‍, ಸರ್‍ ಜಾನ್

ಏಪ್ರಿಲ್ 1807 ರಿಂದ ಫೆಬ್ರವರಿ 1808

ಆರ್ಥರ್‍ ಹೆಚ್. ಕೋಲ್

1809 ರಿಂದ 1812

ಆರ್ಥರ್‍ ಹೆಚ್. ಕೋಲ್

1818 ರಿಂದ 1827

ಸರ್ ಮಾರ್ಕ್ ಕಬ್ಬನ್

ಮೇ 1834

ಕರ್ನಲ್ ಫ್ರೇಸರ್, ಜೇಮ್ಸ್‍ ಸ್ಟುವರ್ಟ್‍

ಅಕ್ಟೋಬರ್ 1834 ರಿಂದ ಜನವರಿ 1836

ಮೇಜರ್ ಆರ್. ಡಿ ಸ್ಟೋಕ್ಸ್

19 ಜನವರಿ 1836 ರಿಂದ 31 ಡಿಸೆಂಬರ್ 1842

 

1831ರ ಅಕ್ಟೋಬರ್ 19 ರಿಂದ ರೆಸಿಡೆಂಟರಿಗೆ ಹೆಚ್ಚುವರಿಯಾಗಿ ಕಮೀಷನರುಗಳನ್ನು ನೇಮಿಸಲಾಯಿತು.

1843ರ ಜನವರಿ 1 ರಂದು, ರೆಸಿಡೆಂಟ್ ಎಂಬ ಹುದ್ದೆಯನ್ನು ರದ್ದುಗೊಳಿಸಲಾಯಿತು ಮತ್ತು ರೆಸಿಡೆಂಟ್‍ರ ಕರ್ತವ್ಯಗಳನ್ನು ಬೆಂಗಳೂರಿನ ಕಮೀಷನರ್‍ ರವರ ಕರ್ತವ್ಯಗಳೊಂದಿಗೆ ಸಂಯೋಜಿಸಲಾಯಿತು.

ರಾಜಭವನ ಉದ್ಯಾನವನದ ಭವ್ಯ ಒಳನೋಟ 

ರಾಜಭವನ ಉದ್ಯಾನವನವು ಸುಮಾರು ಒಂದೂವರೆ ಶತಮಾನದಷ್ಟು ಇತಿಹಾಸ ಹೊಂದಿರುವ ಉದ್ಯಾನವನ. ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ “ಕಮೀಷನರ್ ಬಂಗಲೆ” ಎಂದು ಕರೆಯಲ್ಪಡುತ್ತಿದ್ದು, ನಂತರದ ದಿನಗಳಲ್ಲಿ ರೆಸಿಡೆನ್ಸಿ ಪಾರ್ಕ್ ಎಂದು ಪ್ರಸ್ತುತ “ರಾಜಭವನ ಉದ್ಯಾನವನ” ಎಂದು ಕರೆಯಲ್ಪಡುತ್ತಿದೆ. ಬ್ರಿಟೀಷರ ಪ್ರತಿನಿಧಿ ಮತ್ತು ಆಗಿನ ಮೈಸೂರು ಸಂಸ್ಥಾನದ ಆಯುಕ್ತರಾಗಿದ್ದ ಸರ್ ಮಾರ್ಕ್ ಕಬ್ಬನ್ ರವರು ಈ ರಾಜಭವನದಲ್ಲಿ ನೆಲೆಸಿದ್ದರು. ಕಬ್ಬನ್ ರವರಿಗೆ ಉದ್ಯಾನವನ ಸೌಂದರ್ಯದ ಬಗ್ಗೆ ಇದ್ದ ಹೆಚ್ಚಿನ ಆಸಕ್ತಿ ಮತ್ತು ಒಲವಿನ ಕಾರಣದಿಂದ ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನಕ್ಕೆ 1856 ರಲ್ಲಿ ರಾಜ್ಯ ಬಟಾನಿಕಲ್ ಗಾರ್ಡನ್ ಎನ್ನುವ ಮಾನ್ಯತೆ ಬಂದಿರುತ್ತದೆ. ದೇಶದ ವಿವಿಧ ಭಾಗಗಳಿಂದ ಗಿಡ - ಮರಗಳನ್ನು ತಂದು ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ಪರಿಚಯಿಸಲಾಗಿದೆ.  ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ಗಿಡ-ಮರಗಳನ್ನು ಪರಿಚಯಿಸುವ ಸಂದರ್ಭದಲ್ಲಿ ರಾಜಭವನ ಉದ್ಯಾನವನಕ್ಕೆ ನೀಲಗಿರಿ (ಯುಕಲಿಪ್ಟಸ್ ಸಿಟ್ರಿಯೋಡೋರ), ಅರಕೇರಿಯ, ಸಿಸಾಲ್ ಪಿನಿಯ ಕೋರಿಯಾರ, ಗಿಡಗಳನ್ನು 1860 - 70 ರ ಸುಮಾರಿನಲ್ಲಿ ಪರಿಚಯಿಸಲಾಗಿದೆ. ಇದಾದ ನಂತರದಲ್ಲಿ ಹಲವು ಬಗೆಯ ಗಿಡ – ಮರಗಳು ಮತ್ತು ಅಲಂಕಾರಿಕ ಗಿಡಗಳು, ಹೂವಿನ ಗಿಡಗಳನ್ನು ಈ ಉದ್ಯಾನವನಕ್ಕೆ ಪರಿಚಯಿದೆ.

ರೆಸಿಡೆನ್ಸಿ ಕಾಲದಿಂದಲೂ ರಾಜಭವನ ಉದ್ಯಾನವನವನ್ನು ವಿಶೇಷ ಕಾಳಜಿ ಮತ್ತು ಗಮನಹರಿಸಿ ನಿರ್ವಹಣೆ ಮಾಡಲಾಗುತ್ತಿದೆ. ಈ ಸುಂದರ ಮತ್ತು ರಮಣೀಯ ಉದ್ಯಾನವನ ರಾಜಭವನ ಕಟ್ಟಡಕ್ಕೆ ಮೆರಗನ್ನು ತಂದಿದೆ. ರೆಸಿಡೆನ್ಸಿ ಪಾರ್ಕ್ನ  ಆ ಸಮಯದಲ್ಲಿ ಸುಮಾರು 3400 ಗಿಡಗಳನ್ನು ಕುಂಡಗಳಲ್ಲಿ ಬೆಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಅದರಲ್ಲಿ ಹೆಚ್ಚಿನ ಪಾಲು ಕ್ರೋಟಾನ್, ಫರ್ನ್ ಮತ್ತು ಗುಲಾಬಿ ಗಿಡಗಳು ಎಂದು ತಿಳಿದುಬಂದಿದೆ, ಅಂದಿನ ಕಾಲದಲ್ಲಿಯೂ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವ ಪದ್ದತಿ ಇದ್ದು, ಈಗಲೂ ಸಹ ಕುಂಡಗಳಲ್ಲಿ ಗಿಡಗಳನ್ನು ಬೆಳಸುವ ಪದ್ದತಿ ಮುಂದುವರೆದುಕೊಂಡು  ಬಂದಿದೆ.

ರಾಜಭವನ ಉದ್ಯಾನವನವನ್ನು ಫಾರ್ಮಲ್ ಮತ್ತು ಇನ್-ಫಾರ್ಮಲ್ ಉದ್ಯಾನವನವನ್ನಾಗಿ ನಿರ್ಮಿಸಲಾಗಿದೆ. ಫಾರ್ಮಲ್ ಉದ್ಯಾನವನ ರಾಜಭವನದ ಮುಖ್ಯ ಪೋರ್ಟಿಕೋ ಎದುರು, ಮಧ್ಯ ಭಾಗದ ವಾಕಿಂಗ್ ಪಾತ್, ರಾಯಲ್ ಪಾಮ್ಸ್ ಮತ್ತು ಅದರ ಸುತ್ತಲಿನ ಹುಲ್ಲುಹಾಸು, ಆರ್ಚ್ ಗಳ ಮೇಲೆ ಹಬ್ಬಿಸಿರುವ ಬಳ್ಳಿಜಾತಿ ಹೂವಿನ ಗಿಡಗಳನ್ನು ಹೊಂದಿರುವ ಉದ್ಯಾನವನವಾಗಿದೆ. ಅಂತೆಯೇ ಇನ್-ಫಾರ್ಮಲ್ ಉದ್ಯಾನವನದಲ್ಲಿ ಉದ್ಯಾನವನದ ಪರಿಧಿಯಲ್ಲಿ ಮಾವು, ಸಫೋಟ, ತೆಂಗಿನ ಮರಗಳು ಮತ್ತು ಕೈತೋಟದ ಗಿಡಗಳು ಇರುತ್ತವೆ. ಈ ಫಾರ್ಮಲ್ ಮತ್ತು ಇನ್-ಫಾರ್ಮಲ್ ಉದ್ಯಾನವನದಿಂದ ವಸಾಹತುಶಾಹಿ ಮತ್ತು ಶಾಸ್ತ್ರೀಯ ವಾಸ್ತು ಶಿಲ್ಪವಿರುವ ರಾಜಭವನ ಕಟ್ಟಡಕ್ಕೆ ಒಂದು ಸಾಮರಸ್ಯದ ಮೆರಗನ್ನು ಕೊಟ್ಟಿದೆ.

ಉತ್ತಮವಾಗಿ ವಿನ್ಯಾಸಗೊಳಿಸಲಾದ ಭೂದೃಶ್ಯ (ಲ್ಯಾಂಡ್ ಸ್ಕೇಪ್) ಜೊತೆಗೆ ಟೆರೇಸ್ ಮತ್ತು ಪ್ಯಾರಪೆಟ್ ಗೋಡೆಗಳು, ಲೋಹದ ಕಮಾನುಗಳ (ಮೆಟಾಲಿಕ್ ಆರ್ಚಸ್) ಮೇಲೆ ಹಬ್ಬಿಸಿರುವ ಬಳ್ಳಿಜಾತಿ ಹೂವಿನ ಗಿಡಗಳ ಸೌಂದರ್ಯ, ರಾಜಭವನ ಕಟ್ಟಡದ ಭವ್ಯತೆಗೆ ಸೌಂದರ್ಯವನ್ನು ನೀಡಿದೆ. ಗಾಜಿನಮನೆಯನ್ನು 2000 ನೇ ಸಾಲಿನಲ್ಲಿ ನಿರ್ಮಿಸಿದ್ದು, ರಾಜಭವನದಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು ಇಲ್ಲಿ ಜರುಗುತ್ತಿವೆ.

ರಾಜಭವನ ಮುಂಭಾಗದ ಹುಲ್ಲುಹಾಸಿನ ಎಡಭಾಗದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಆಕರ್ಷಣೀಯ ಜಲಪಾತ (ವಾಟರ್ ಫಾಲ್ಸ್) ಉದ್ಯಾನವನ ಏಕತಾನತೆಯನ್ನು ಹೋಗಲಾಡಿಸಿ ಹೊಸ ರೂಪವನ್ನು ಒದಗಿಸಿದೆ  ಮತ್ತು ಇದರ ಬಲಭಾಗದಲ್ಲಿರುವ ಗಾಂಧೀಜಿಯವರ ಪುತ್ಥಳಿಯು ಇಲ್ಲಿನ ಘನತೆಯನ್ನು ಹೆಚ್ಚಿಸಿ ಪ್ರಶಾಂತತೆಯ ಸ್ಪರ್ಶವನ್ನು ತಂದುಕೊಟ್ಟಿದೆ.

ಈ ಉದ್ಯಾನವನವನದಲ್ಲಿರುವ ಹದ್ದುಗಳು, ಕಾಗೆ, ಮರಕುಟಿಕ, ಪಾರಿವಾಳ, ಮೈನಾ ಹಕ್ಕಿ, ಅಳಿಲು, ಚಿಟ್ಟೆ, ಇತ್ಯಾದಿಗಳು ಈ ಉದ್ಯಾನವನಕ್ಕೆ ವೈವಿಧ್ಯತೆಯನ್ನು ನೀಡಿವೆ.

ರಾಜಭವನ ಉದ್ಯಾನವನದಲ್ಲಿ ವಿವಿಧ ಜಾತಿಯ ಮರಗಳಾದ ಗುಲ್ ಮೊಹರ್, ಮಳೆಮರ, ನೀಲಗಿರಿಮರ, ಆಕಾಶಮಲ್ಲಿಗೆ, ನೀಲಿಜಕರಂಡ, ಫೈಕಸ್ ಬೆಂಜಮಿನ, ರೋಸ್ ವುಡ್ (ಬೀಟೇಮರ), ಸ್ಪೆಥೋಡಿಯ, ರುದ್ರಾಕ್ಷಿ, ಪೆಲ್ಟೋಫೋರಮ್, ಸಿಲ್ವರ್ ಓಕ್, ರಾಯಲ್ ಪಾಮ್ಸ್, ಟಬೂಬಿಯ ಜಾತಿ, ಆಲದಮರ, ಸ್ಟೆರ್ ಕುಲಿಯ, ಬಾಟಲ್ ಬ್ರಷ್, ನಾಗಲಿಂಗಪುಷ್ಟ, ಕ್ಯಾಸಿಯ ಜಾತಿ, ಅರಳೀಮರ, ಸಿಸಾಲ್ಫಿನಿಯ ಕೋರಿಯಾರ, ಕಾಲ್ವೀಲಿಯಾ, ಹೊಂಗೆಮರ, ಫರ್ನ್ ಟ್ರೀ, ಪ್ರೈಡ್ ಆಪ್ ಇಂಡಿಯಾ, ಬಿದಿರು, ಪಾಲಿಯಾಲ್ಥಿಯ ಲಾಂಗಿಪೋಲಿಯ (ಅಶೋಕ), ಸಂಪಿಗೆ, ಮಾವು, ಸಪೋಟ, ಸೀಬೆ, ಹುಣಸೆ, ದಿವಿಹಲಸು (ಬ್ರೆಡ್ ಫ್ರೂಟ್) ಬೆಣ್ಣೆಹಣ್ಣು, ಚಕೋತ,  ಹಲಸು, ಕೋಕೋ ಹಣ್ಣಿನ ಗಿಡ, ಕಮರಕ್, ತೆಂಗು, ಅಡಿಕೆ, ಕರಿಮೆಣಸು ಇತ್ಯಾದಿಗಳು ಮತ್ತು ವಿವಿಧ ಜಾತಿಯ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಬಳ್ಳಿ ಜಾತಿಯ ಗಿಡಗಳು ಇರುತ್ತವೆ.

ರಾಜಭವನ ಉದ್ಯಾನವನದ ಅಭಿವೃದ್ಧಿ ಮತ್ತು ಸುಂಧರೀಕರಣ ಕಾರ್ಯವನ್ನು 2018-19 ಮತ್ತು 2019-20 ನೇ ಸಾಲಿನಲ್ಲಿ ಕೈಗೊಂಡಿದ್ದು, ಹೊಸದಾಗಿ ಹುಲ್ಲುಹಾಸು, ದೇಶೀಯ ಗಿಡಗಳು, ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳು, ಸಾಂಬಾರು ಬೆಳೆಗಳು, ಗ್ರೌಂಡ್ ಕವರ್ ಪ್ಲಾಂಟ್ಸ್, ಶ್ರಬರಿ ಪ್ಲಾಂಟ್ಸ್, ಹರ್ಬಲ್ ಗಾರ್ಡನ್, ಟೋಪಿಯರಿ ಗಾರ್ಡನ್, ಬೋನ್ಸಾಯ್  ಪ್ಲಾಂಟ್ಸ್, ರೋಸ್ ಗಾರ್ಡನ್, ಹೆಡ್ಜಿಂಗ್ ಪ್ಲಾಂಟ್ಸ್, ಎಕ್ಸಾಟಿಕ್ ಪ್ಲಾಂಟ್ಸ್, ಲೋಟಸ್ ಪ್ಲಾಂಟ್ಸ್, ಬಳ್ಳಿ ಜಾತಿಯ ಹೂವಿನ ಗಿಡಗಳು, ಬರ್ಡ್ ಬಾತ್, ವಾರ್ಷಿಕ ಹೂವಿನ ಗಿಡಗಳು, ಮಿನಿ ವಾಟರ್ ಫಾಲ್ಸ್, ಸ್ಪ್ರಿಂಕ್ಲರ್ ಸಿಸ್ಟಮ್, ಮಳೆ ನೀರು ಇಂಗುಗುಂಡಿ, ಇತ್ಯಾದಿ, ಕೆಲಸಗಳನ್ನು ಕೈಗೊಂಡಿದ್ದು, ಉದ್ಯಾನವನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಈ ಉದ್ಯಾನವನದ ಸೌಂದರ್ಯ ಮತ್ತು ಸಸ್ಯ ವೈವಿದ್ಯತೆಯನ್ನು ಹೆಚ್ಚಿಸಿ, ಸ್ವಯಂ ಸಮರ್ಥನೀಯ ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಿದೆ.  

ಕಳೆದ ಸುಮಾರು ಎಂಟು ವರ್ಷಗಳಿಂದ ರಾಜಭವನ ಉದ್ಯಾನವನಕ್ಕೆ ಹಲವು ಬಗೆಯ ಗಿಡಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಲೆಜಸ್ಟ್ರೋಮಿಯ ಇಂಡಿಕ, ಹೂವಿನ ಜಾತಿಯ ರುದ್ರಾಕ್ಷಿ, ಆಂಥೂರಿಯಂ, ಸ್ಪ್ಯಾಥಿಪೈಲಮ್, ಆಕ್ಯಾಲಿಫ, ದುರಂತ ಗೋಲ್ಡಿಯಾನ, ಪ್ಲೂಮೇರಿಯ, ದಾಸವಾಳ, ಪೆಟ್ರಿಯ (ಬಿಳಿಹೂ), ಜಟ್ರೋಪ, ಏರಿಥ್ರಿನ ಕ್ರಿಸ್ಟಗಲ್ಲಿ (ಕೋರಲ್ ಪ್ಲಾಂಟ್ಸ್), ಶ್ರೀಗಂಧ, ಮಲ್ಲಿಗೆ ಜಾತಿ, ಕಣಗೆಲೆ, ಡ್ರಸೀನ ತಳಿಗಳು, ಸ್ಪೆಡರ್ ಲಿಲ್ಲಿ, ರಾತ್ರಿರಾಣಿ, ಪಾರಿಜಾತ, ಲೋರೋಪೆಟಲಮ್, ಲ್ಯೂಕೋಪೈಲಮ್, ಶೆಫ್ಲರ, ನಂದಿಬಟ್ಟಲು (ಡ್ವಾರ್ಪ್), ಕ್ಯಾನ, ರೆಡ್ ಜೇಡ್ ಬಳ್ಳಿಜಾತಿ ಹೂವಿನ ಗಿಡಗಳು, ಮನಿಪ್ಲಾಂಟ್ (ಹಳದಿ ಎಲೆ) ಬೋನ್ಸಾಯಿ ಗಿಡಗಳು, ಮೊಂಡ ಗ್ರಾಸ್, ರಿಯೋ - ಡಿಸ್-ಕಲರ್, ಕ್ರೋಟಾನ್, ಫಾಕ್ಸ್ ಟೈಲ್  ಪಾಮ್ಸ್, ಫೈಕಸ್ ಬ್ಲಾಕಿಯಾನ, ಚಾಂಪಿಯನ್ ಪಾಮ್ಸ್, ಬಿಸ್ ಮಾರ್ಕಿಯ ಪಾಮ್ಸ್, ಬುದ್ದಾಸ್ - ಬೆಲ್ಲಿ - ಬಿದಿರು, ಬಿಗ್ನೋನಿಯ, ಮೆಗಪೊಟಮಿಕ, ಲೋಟಸ್ ಸಸ್ಯಗಳು, ಪಾರ್ಲರ್ ಪಾಮ್ಸ್, ಪೈಕಸ್ ಸ್ಟಾರ್ ಲೈಟ್, ಸಾನ್ಸಿವೇರಿಯ, ಫಿಲ್ಲೋಡೆಂಡ್ರಾನ್, ಅಗ್ಲೋನಿಮ, ಎರಾಂತಮಮ್, ಲಾಲಿಪಾಪ್, ಪೆಂಟಾಸ್, ಕೂಪಿಯ ಮತ್ತು ಕರಿಮೆಣಸು, ಸರ್ವ ಸಾಂಬಾರು ಗಿಡ (ಆಲ್ ಸ್ಪೈಸ್),  ಏಲಕ್ಕಿ, ಜಾ-ಕಾಯಿ, ಚಕ್ಕೆ,  ಬೆಣ್ಣೆಹಣ್ಣು, ತೆಂಗು, ನಿಂಬೆ, ಕಿತ್ತಳೆ, ನಾಗಪುರ ಕಿತ್ತಳೆ, ಅಂಜೂರ, ಚೆರಿ, ಕಮರಕ್, ವಾಟರ್ ಆಪಲ್, ರಾಂಫಲ, ಹಲಸು, ನೇರಳೆ ಇತ್ಯಾದಿ,  ಹಲವು ಬಗೆಯ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಪರಿಚಯಿಸಿ ಉದ್ಯಾನವನದ ಸಸ್ಯಸಂಪತ್ತನ್ನು ಹೆಚ್ಚಿಸಿದೆ.

ಈ ಉದ್ಯಾನವನವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರ ಜೊತೆಗೆ, ವಾರ್ಷಿಕ ಮತ್ತು ಬಹು ವಾರ್ಷಿಕ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಕುಂಡಗಳಲ್ಲಿ ಬೆಳಸಿ ಪೋಷಿಸುವ ಪದ್ದತಿಯನ್ನು ಇಲ್ಲಿ ಅಳವಡಿಸಿಕೊಂಡಿದೆ. ಇಲ್ಲಿ ಕುಂಡಗಳಲ್ಲಿ ಅಭಿವೃದ್ಧಿಪಡಿಸಿದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ರಾಜಭವನ ಕಛೇರಿಗಳಲ್ಲಿ ಅಲಂಕರಿಸಲು, ಗಣ್ಯರು, ಅತಿಗಣ್ಯರು ಆಗಮಿಸಿದಾಗ ಮತ್ತು ರಾಜಭವನದಲ್ಲಿ ಏರ್ಪಡಿಸುವ ಸಭೆ - ಸಮಾರಂಭಗಳು ಮತ್ತು ವಿಶೇಷ ಕಾರ್ಯಕ್ರಮಗಳ ಸಂಧರ್ಭದಲ್ಲಿ ಜೋಡಿಸಿ ಅಲಂಕರಿಸಲು ಬಳಸಲಾಗುತ್ತಿದೆ. 

 

ರಾಜಭವನ ಕಟ್ಟಡ

ರಾಜಭವನ ಕಟ್ಟಡವು ಪೌರ್ವಾತ್ಯ ಮತ್ತು ಪಾಶ್ಚಾತ್ಯ ಎರಡೂ ಪರಂಪರೆಗಳ ಅತ್ಯುತ್ತಮ ಪರಿಕಲ್ಪನೆಯಿಂದ ರೂಪಿಸಲಾದ ಭವ್ಯವಾದ ಕಟ್ಟಡವಾಗಿದ್ದು, ಅದು ಸ್ವರೂಪದಲ್ಲಿ ಅತ್ಯಂತ ಅಲಂಕಾರಯುತ, ವಿಶ್ರಾಂತಿಯುತ, ಆಹ್ಲಾದಕರವಾದ ವಾತಾವರಣದ ಸಂಯೋಜನೆಯಿಂದ ಕೂಡಿದೆ. ಹಾಗಾಗಿ, ರಾಜಭವನ ಕಟ್ಟಡವು ಪ್ರತಿಯೊಬ್ಬರ ಮನಸೊರೆಗೊಳ್ಳುತ್ತಿದೆ.

     

ಪುಷ್ಪೋದ್ಯಾನಗಳು

ಕಲಾಕೃತಿಗಳು

ಒಳಾಂಗಣ

ರಾಜಭವನ ಉದ್ಯಾನಗಳು

 

ರಾಜಭವನದ ಪುಷ್ಪೋದ್ಯಾನಕ್ಕೆ ಒಂದೂವರೆ ಶತಮಾನಕ್ಕಿಂತ ಹೆಚ್ಚಿನ ಇತಿಹಾಸವಿದೆ. ಈ ಉದ್ಯಾನವನವು 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ “ರೆಸಿಡೆನ್ಸಿ ಪಾರ್ಕ್‍” ಎಂದು ಕರೆಯಲ್ಪಡುತ್ತಿದ್ದ

ವಿಶಾಲವಾದ, ಏರಿಳಿತಗಳುಳ್ಳ ಮತ್ತು ಪ್ರತಿಷ್ಠಿತವಾದ ಸುಮಾರು 92 ಎಕರೆ ಪ್ರದೇಶಗಳ ವಿಸ್ತೀರ್ಣವುಳ್ಳದ್ದಾಗಿದೆ. ಈ ಹಿಂದೆ ಇದನ್ನು ‘ಕಮಿಷನರ್ ಬಂಗಲೆ ಗಾರ್ಡನ್‍’ ಎಂದು ಕರೆಯಲಾಗುತ್ತಿತ್ತು. ಮೂಲ ಉದ್ಯಾನವನವನ್ನು ಕಬ್ಬನ್, ಲಿವಿನ್ ಬೌರಿಂಗ್, ಜಾನ್‍ ಮಿಡೆ ಮತ್ತು ಜೇಮ್ಸ್‍ ಗಾರ್ಡನ್ ಕಮೀಷನರುಗಳ ಅವಧಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.

ಈ ಉದ್ಯಾನವು ರಾಜ್ಯದ ಲಾಲ್‍ಬಾಗ್‍ ಉದ್ಯಾನವನದ ಸಮಕಾಲೀನ ಪುಷ್ಪೋದ್ಯಾನವಾಗಿದೆ. 1840ಕ್ಕೂ ಮುಂಚೆ, ಈ ಇಡೀ ‘ಹೈ ಗ್ರೌಂಡ್ಸ್‍” ಪ್ರದೇಶವು ಹೆಚ್ಚು ಕಡಿಮೆ ಕೃಷಿಯೋಗ್ಯವಾದ ಒಣಭೂಮಿಯಾಗಿತ್ತು. ಅಲ್ಲಿ ಕೇವಲ ಕೆಲವು ಆಲದ ಮರ ಅಥವಾ ಅಂಜೂರದ ಮರಗಳಿದ್ದವು. ಅವುಗಳಲ್ಲಿ ಮೂರು ಮರಗಳನ್ನು ಈಗಲೂ ರಾಜಭವನದಲ್ಲಿ ಕಾಣಬಹುದಾಗಿದೆ. ರಾಜಭವನ ನಿವಾಸವು ಇರುವ ಸ್ಥಳವು ಆ ಪ್ರದೇಶದಲ್ಲಿಯೇ ಅತ್ಯುನ್ನತ ಸ್ಥಳವಾಗಿತ್ತು. ಕಮಿಷನರರ ಉದ್ಯಾನವು ವಿವಿಧ ಸಸ್ಯ ತಳಿಗಳನ್ನು ಹೊಂದಿತ್ತು.

 

ಅರಣ್ಯ ಇಲಾಖೆಯ ಡಾ. ಕ್ಲೆಘೋರ್ನ್‍, ಲೋಕೋಪಯೋಗಿ ಇಲಾಖೆಯ ಕರ್ನಲ್ ಪಕಲ್ ಮತ್ತು ಕಮಿಷನರರ ಕಾರ್ಯದರ್ಶಿಯಾದ ಕ್ಯಾಪ್ಟನ್‍ ಕನ್ನಿಂಗ್‍ ಹ್ಯಾಮ್‍ರವರು

 

ಉದ್ಯಾನವನವನ್ನು ಜಲ್ಲಿ ಕಲ್ಲುಗಳ ಪಾದಾಚಾರಿ ರಸ್ತೆಗಳು, ನೀರಿನ ಚಿಲುಮೆಯ ತೊಟ್ಟಿ, ಲತಾಮಂಟಪಗಳು ಮತ್ತು ಅಪರೂಪದ ತಳಿಯಾಗಿರುವ ಕುಕ್ ಪೈನ್ ಮರಗಳಿಂದ ಅಲಂಕರಿಸಲು ಹೆಚ್ಚು ಆಸಕ್ತಿ ತೋರಿದರು.

ರೆಸಿಡೆನ್ಸಿಯಾಗಿದ್ದ ದಿನಗಳಿಂದಲೂ ರಾಜಭವನವು ಅತ್ಯುತ್ತಮ ಸದಭಿರುಚಿಯ ತೋಟಗಾರಿಕೆಯಿಂದ ಸಮೃದ್ಧವಾಗಿದೆ. ಒಂದು ಕಾಲದಲ್ಲಿ ರೆಸಿಡೆನ್ಸಿ ಗಾರ್ಡನ್ ಸುಮಾರು 3400 ಸಸ್ಯ ಕುಂಡಗಳನ್ನು ಹೊಂದಿತ್ತು. ಇವುಗಳಲ್ಲಿ ಅತಿ ಹೆಚ್ಚಿನ ಸಂಗ್ರಹವೆಂದರೆ ಕ್ರೋಟಾನ್‍ಗಳು, ನಂತರ ಎಲೆ ಮತ್ತು ಹೂಗೊಂಚಲು ಸಸ್ಯಗಳು, ಜರೀಗಿಡಗಳು ಮತ್ತು ಗುಲಾಬಿಗಳದ್ದಾಗಿದೆ. ಈ ಸಂಪ್ರದಾಯವನ್ನು ಇಂದಿಗೂ ಅನುಸರಿಸಿಕೊಂಡು ಬರುತ್ತಿರುವುದಷ್ಟೇ ಅಲ್ಲದೆ ಸಾಕಷ್ಟು ಸುಧಾರಣೆಯನ್ನೂ ಸಹ ಮಾಡಲಾಗಿದೆ.

ಉದ್ಯಾನವು ವೈವಿಧ್ಯಮಯವಾದ ಅಲಂಕಾರಿಕ ಹಾಗೂ ಇತರ ವಿಶಿಷ್ಟ ತಳಿಯ ಹೂಗಳು ಮತ್ತು ಸಸ್ಯಗಳ ಪ್ರಬೇಧಗಳನ್ನೂ ಸಹ ಹೊಂದಿದೆ. ಹೀಗೆ ಸ್ವಾರಸ್ಯಕರವಾದ ಅಲಂಕಾರ ಮತ್ತು ಪ್ರಕೃತಿ ಪ್ರೇಮದ ಪರಂಪರೆ ನಿರಂತರವಾಗಿ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ರಾಜಭವನ ಪುಷ್ಪೋದ್ಯಾನದ ವಿನ್ಯಾಸ ಮತ್ತು ಭೂದೃಶ್ಯ

ಪುಷ್ಪೋದ್ಯಾನದ ಸುತ್ತಲ ಆವರಣಗಳಲ್ಲಿ ಅನೌಪಚಾರಿಕ ಉದ್ಯಾನವಿದ್ದು, ಅದರಲ್ಲಿ ಮಾವು, ಸಪೋಟ, ಪರಂಗಿ, ಪೇರಳೆ, ಅಂಜೂರದಂಥ ಹಣ್ಣಿನ ಮರಗಳನ್ನು ಮತ್ತು ಇತರ ಅಡುಗೆ ಮನೆ ಉಪಯುಕ್ತ ಗಿಡಗಳನ್ನು ಬೆಳೆಸಲಾಗಿದೆ.

ಔಪಚಾರಿಕ ಮತ್ತು ಅನೌಪಚಾರಿಕ ಉದ್ಯಾನಗಳು ರಾಜಭವನ ಕಟ್ಟಡದ ವಸಾಹತುಶಾಹಿ ಮತ್ತು ಶಾಸ್ತ್ರೀಯ ವಾಸ್ತುಶೈಲಿಯೊಂದಿಗೆ ಸಾಮರಸ್ಯವನ್ನು ಹೊಂದಿವೆ. ಕಪ್ಪು ಗ್ರಾನೈಟ್‍ನಲ್ಲಿರುವ ಅಶೋಕ ಸ್ತಂಭದ ಪ್ರತಿಕೃತಿಯು ಪ್ರವೇಶದ್ವಾರದಲ್ಲಿ ಆಯಕಟ್ಟನ ಸ್ಥಾನದಲ್ಲಿದೆ.

 

ಉದ್ಯಾನವು ಪ್ಯಾರಾಪೆಟ್‍ ಗೋಡೆಗಳು, ಹೂವಿನ ಬಳ್ಳಿಗಳಿಂದ ಆವೃತವಾದ ಲೋಹದ ಕಮಾನುಗಳಿಂದ ಕೂಡಿ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಭೂದೃಶ್ಯವನ್ನು ಹೊಂದಿದ್ದು, ಇದು ಕಟ್ಟಡದ ಭವ್ಯತೆಗೆ ನವಿರಾದ ಸೌಂದರ್ಯವನ್ನು ನೀಡುತ್ತದೆ. ಗಾಜಿನ ಮನೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

ಮುಖ್ಯವಾದ ಹುಲ್ಲುಹಾಸಿನ ಎಡ ಮೂಲೆಯಲ್ಲಿ ರಚಿಸಲಾದ ಕೃತಕ ಜಲಪಾತವು ಕಟ್ಟಡಗಳಿಗೆ ಆಯಕಟ್ಟಿನ ಆವರಣವನ್ನು ನೀಡುವುದಲ್ಲದೇ, ಮೊಘಲರ ಶಾಲಿಮಾರ್‍ ಗಾರ್ಡನ್‍ಗಳಂತೆ ಧುಮುಕುವ ನೀರಿನ ರಭಸದೊಂದಿಗೆ ಆ ಸ್ಥಳದ ಏಕತಾನತೆಯನ್ನು ಹೋಗಲಾಡಿಸುತ್ತದೆ.

ಮುಖ್ಯ ಹುಲ್ಲುಹಾಸಿಗೆ ಎದುರಿಗಿರುವ ನೀರಿನ ಕಿರು ಜಲಪಾತದ ಬಲಭಾಗದಲ್ಲಿ “ಯೋಗ ಮುದ್ರೆ”ಯಲ್ಲಿರುವ ಮಹಾತ್ಮ ಗಾಂಧೀಜಿಯವರ ಕಂಚಿನ ಪ್ರತಿಮೆಯು ವಾತಾವರಣಕ್ಕೆ ಪ್ರಶಾಂತತೆ, ಶಾಂತಿ ಮತ್ತು ಸುಂದರ ಸ್ಪರ್ಶವನ್ನು ನೀಡುತ್ತದೆ. ಉದ್ಯಾನವು ಸಾಕಷ್ಟು ಸಂಖ್ಯೆಯ ಋತುಕಾಲಿಕ ಬಣ್ಣದ ಹೂಗಿಡಗಳನ್ನು ಹೊಂದಿದ್ದು ಅದು ಉದ್ಯಾನವನ್ನು ಪ್ರಜ್ವಲಿಸುತ್ತದೆ.

ಸಸ್ಯೋದ್ಯಾನ (ಲಾಲ್‍ಬಾಗ್)ಕ್ಕೆ ಪರಿಚಯಿಸಲಾಗುವ ಯಾವುದೇ ವಿನೂತನ ತಳಿಗಳ ರೆಸಿಡೆನ್ಸಿ ಉದ್ಯಾನದಲ್ಲಿಯೂ ಸಹ ಕಾಣಬಹುದಾಗಿದೆ.

ಸುಂದರವಾದ ಹಚ್ಚಹಸಿರಿನ ಹುಲ್ಲುಹಾಸುಗಳು, ವರ್ಣರಂಜಿತ ಹೂವಿನ ಹಾಸುಗಳು, ವಿನೂತನವಾದ ಬಣ್ಣದ ಗುಲಾಬಿಗಳು, ಚಿಲಿಪಿಲಿ ಸದ್ದಿನ ಪಕ್ಷಿಗಳ ಕಲರವವು ನಿವಾಸಿಗಳ ಅಭಿರುಚಿಯನ್ನು ಪ್ರತಿಬಿಂಬಿಸುವುದಲ್ಲದೆ ಪ್ರವಾಸಿಗರಿಗೆ ಸೌಂದರ್ಯದ ಆನಂದವನ್ನು ನೀಡುತ್ತದೆ. ಇತ್ತೀಚೆಗೆ ಹಸಿರು ಮನೆಯನ್ನು ಸ್ಥಾಪಿಸಲಾಗಿದೆ.

ಹಿಂದಿನ ರೆಸಿಡೆನ್ಸಿ ಉದ್ಯಾನವು ವಿಶಾಲವಾದ ಪ್ರದೇಶವನ್ನು ಒಳಗೊಂಡಿತ್ತು. ಅಲ್ಲಿ ಈಗ ಭವ್ಯವಾದ ವಿಧಾನ ಸೌಧ, ಪಾರ್ಕ್‍ ಹೌಸ್, ಸುದರ್ಶನಅತಿಥಿ ಗೃಹ ಮತ್ತು ಶಾಸಕರ ಭವನವಿದೆ. ವರ್ಷಗಳು ಉರುಳಿದಂತೆ ಈ ಎಲ್ಲಾ ಕಟ್ಟಡಗಳ ನಿರ್ಮಾಣದೊಂದಿಗೆ, ವಿಶಾಲವಾದ ರೆಸಿಡೆನ್ಸಿ ಉದ್ಯಾನವು ಕಟ್ಟಡಗಳನ್ನು ಒಳಗೊಂಡಂತೆ ಪ್ರಸ್ತುತ ಅದರ ವ್ಯಾಪ್ತಿ 18 ಎಕರೆಗೆ ಇಳಿಕೆಯಾಗಿದೆ.

 

ನಿಮಗಿದು ಗೊತ್ತೇ?

  • ಆ ದಿನಗಳಲ್ಲಿ ನೆಟ್ಟ ಒಂದು ಕುಕ್ ಪೈನ್ ಮರವು ಈ ಪ್ರದೇಶದಲ್ಲಿರುವ ಆ ಜಾತಿಯ ಮರಗಳಲ್ಲಿಯೇಅತ್ಯಂತ ಹಳೆಯ ಮರವಾಗಿದ್ದು ಅದು ಇನ್ನೂ ಸಹ ಬೆಳೆಯುತ್ತಲೇ ಇದೆ!
  • ಈಗ ಕೇವಲ 16 ಎಕರೆ 4 ಗುಂಟೆ ಇರುವ ರಾಜಭವನ ಉದ್ಯಾನವು ಹಿಂದೆ ಪ್ರಾರಂಭದಲ್ಲಿ 92 ಎಕರೆಗೂ ಹೆಚ್ಚಿನ ವ್ಯಾಪ್ತಿಯ ವಿಸ್ತಾರವನ್ನು ಹೊಂದಿತ್ತು.

ರಾಜಭವನದ ಕಲಾಕೃತಿಗಳು

ರಾಜಭವನವು ಕಲೆಯ ನಿಧಿಯಾಗಿದೆ ಮತ್ತು ಅದರ ಕಲಾ ಸಂಗ್ರಹವು ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಎರಡೂ ಪರಂಪರೆಗಳನ್ನು ಹೊಂದಿದೆ. ಅದರ ಕಲಾಕೃತಿ ಸಂಗ್ರಹವು ಪಾಶ್ಚಾತ್ಯ ದೇಶದಿಂದ ಹರ್ಬಟ್‍ ಪ್ಯಾರಿಷ್ ಮತ್ತು ವೂವರ್‍ ಬ್ರಾಂಕ್ಟ್‍ನಂತಹವರ ಹಲವು ಶ್ರೇಷ್ಠ ಕಲಾಕೃತಿಗಳನ್ನು, ಹಾಗೆಯೇ ಮೈಸೂರು, ತಂಜಾವೂರು ಮತ್ತು ಬೆಂಗಾಲಿ ಕಲಾಪಂಥದ ಕುಂಚದ ಕಲೆಯ ಹಲವು ಪಾರಂಪರಿಕ ಕಲಾಕೃತಿಗಳನ್ನು ಒಳಗೊಂಡಿದೆ.

ರಾಜಭವನದ ಕಲಾಕೃತಿಗಳ ಸಂಪತ್ತುಗಳಲ್ಲಿ ಅಜಂತಾ ಭಿತ್ತಿಪತ್ರಗಳ ಹಲವಾರು ಪ್ರತಿಗಳು ಮತ್ತು 19ನೇ ಶತಮಾನದಷ್ಟು ಹಿಂದಿನ ಸುಂದರವಾದ ಮತ್ತು ಅಪರೂಪದ ಸಾಕಷ್ಟು ಕಲಾಕೃತಿಗಳು ಮತ್ತು ಲೋಹದ ಶಿಲ್ಪಗಳು ಇವೆ. ಇವುಗಳನ್ನು ಮುಖ್ಯವಾಗಿ ಮೂರು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಅವುಗಳೆಂದರೆ, ಚಿತ್ರಕಲೆ, ಶಿಲ್ಪಗಳು ಮತ್ತು ಸುಮಾರು ನೂರಾ ಮೂವತ್ತು ಮುದ್ರಿತ ಅಚ್ಚುಗಳು.

ಕಾರಿಡಾರ್‍ಗಳಲ್ಲಿ ಗಮನಾರ್ಹವಾದ ಎಚ್ಚಿಂಗ್ ಮತ್ತು ಲಿಥೋ ಕೃತಿಗಳನ್ನು ಪ್ರದರ್ಶಿಸಲಾಗಿದೆ. ತಾಂತ್ರಿಕವಾಗಿ ಮತ್ತು ಗುಣಾತ್ಮಕವಾಗಿ ಅವು ಮೇರು ಕೃತಿಗಳಾಗಿವೆ. ಈ ಅಚ್ಚು ಚಿತ್ರಗಳು ಹಿಂದಿನ ದಿನಗಳ ಸಮಾಜಿಕ ಮತ್ತು ಜನಾಂಗೀಯ ಪದ್ಧತಿಗಳನ್ನು ಹಾಗೂ ವೇಷಭೂಷಣಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗಾಗಿ, ಅವು ಬಹಳ ಮುಖ್ಯವಾದವುಗಳಾಗಿವೆ. ಜೊತೆಗೆ ಅವು ಐತಿಹಾಸಿಕವಾಗಿಯೂ, ಭೌಗೋಳಿಕವಾಗಿಯೂ ಮುಖ್ಯವಾಗಿವೆ. ಇವುಗಳಲ್ಲಿ ಹಲವು ಕೃತಿಗಳು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಅವಧಿಗೆ ಸೇರಿವೆ. ಈ ಕೆಲವು ಚಿತ್ರಗಳನ್ನು ಯಥೋಚಿತ ಶ್ರೇಷ್ಠ ಕಲಾಕಾರರು ರಚಿಸಿದ್ದು, ನಂತರ ಅವುಗಳನ್ನು ಲಿಥೋ ಮತ್ತು ಎಚ್ಚಿಂಗ್‍ ಮಾದರಿಯಲ್ಲಿ ಅಚ್ಚೊತ್ತಲಾಗಿದೆ.

ಅನೇಕ ಕಲಾಕೃತಿಗಳು ಕಲಾವಿದರ ಹೆಸರನ್ನು ಒಳಗೊಂಡಿರದಿದ್ದರೂ, ಅವು ಉನ್ನತ ಗುಣಮಟ್ಟದ ಕಲಾಕೃತಿಗಳಾಗಿರುವುದರಿಂದಅವುಗಳನ್ನು ಮುಂದಿನ ಪೀಳಿಗೆಗಾಗಿ ರಾಜಭವನದಲ್ಲಿ ಸಂರಕ್ಷಿಸಿಡಲಾಗಿದೆ.

                 

ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸ

ರಾಜಭವನವು ಸುಮಾರು 18 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಆಗ್ನೇಯ ಮೂಲೆಯಲ್ಲಿ ವಿಧಾನ ಸೌಧ, ವಾಯುವ್ಯದಲ್ಲಿ ಶಾಸಕರ ಭವನ ಮತ್ತು ಈಶಾನ್ಯದಲ್ಲಿ ಆಲ್ ಇಂಡಿಯಾ ರೇಡಿಯೋ ಕೇಂದ್ರವನ್ನು ಕಾಣಬಹುದಾಗಿದೆ. ಸುಮಾರು ಎರಡೂವರೆ ಎಕರೆ ಪ್ರದೇಶವನ್ನು ಕಟ್ಟಡವು ಆವರಿಸಿಕೊಂಡಿದೆ.

 

ರೆಸಿಡೆನ್ಸಿಯ ರಾಜ ವೈಭೋವೋಪೇತವಾದ ಪೀಠೋಪಕರಣಗಳು, ಉನ್ನತ ದರ್ಜೆಯ ವಸ್ತ್ರಗಳು, ವಿಶೇಷವಾಗಿ ವಿನ್ಯಾಸಗೊಳಿಸಿದ ಪಾತ್ರೆಗಳು ಮತ್ತು ಚಮಚಗಳು, ಚಿನ್ನದ ಲೇಪನ ಹೊಂದಿರುವ ಚೌಕಟ್ಟುಗಳಿಂದ ಕೂಡಿದ ಸುಂದರವಾದ ತೈಲ ವರ್ಣಚಿತ್ರಗಳು, ಪಾರಿತೋಷಕಗಳು, ಅತ್ಯುತ್ತಮವಾದ ಬಿಲಿಯರ್ಡ್ಸ್ ಟೇಬಲ್, ಅಲಂಕೃತವಾದ ಪಿಯಾನೋ ಮತ್ತು ಈ ಎಲ್ಲದರಕ್ಕಿಂತ ಹೆಚ್ಚಾಗಿ, ಪ್ರಾಚೀನ ವಸ್ತುಗಳು ಮತ್ತು ಪುಸ್ತಕಗಳ ದೊಡ್ಡ ಸಂಗ್ರಹವನ್ನು ಹೊಂದಿದೆ.

 

ರಾಜಭವನ ರಸ್ತೆಯು ಎರಡು ಬದಿಯಲ್ಲಿಯೂ ಕಾವಲು ಕೊಠಡಿಗಳಿಂದ ಕೂಡಿದ ಹಿತ್ತಾಳೆಯ ಲಾಂಛನದಿಂದ ಅಲಂಕರಿಸಿದ ಪ್ರಧಾನವಾದ ಕಬ್ಬಿಣದ ಗೇಟ್‍ನ ಕಡೆಗೆ ಕರೆದೊಯ್ಯುತ್ತದೆ. ಮುಖ್ಯದ್ವಾರದ ಎರಡೂ ಬದಿಯಲ್ಲಿರುವ

ಎರಡು ಫಿರಂಗಿ ರಚನೆಗಳು ಕಟ್ಟಡದ ಹಿಂದಿನ ಕಲ್ಪನೆಗಳನ್ನು ನೀಡುತ್ತದೆ. ದ್ವಾರದಿಂದ ಸುಮಾರು ಇನ್ನೂರು ಅಡಿ ಉದ್ದದ ಚಾಲನೆಯ ನಂತರ ಉತ್ತಮವಾಗಿ ನಿರ್ವಹಿಸಲಾದ ಉದ್ಯಾನ ಮತ್ತು ಹುಲ್ಲು ಹಾಸುಗಳನ್ನು ಹೊಂದಿರುವ ಸ್ಥಳದಿಂದ ಎದುರಿಗಿನ ಮೊಗಸಾಲೆಗೆ ಕೊಂಡೊಯ್ಯುತ್ತದೆ. ಪುಷ್ಪಾಲಂಕೃತವಾದ ಪ್ರವೇಶ ದ್ವಾರವು ಸಂದರ್ಶಕರನ್ನು ಕೂಡಲೇ ಆಕರ್ಷಿಸುತ್ತದೆ.

19ನೇ ಶತಮಾನದ ಸಾಂಪ್ರದಾಯಿಕ ಬಂಗಲೆಗಳು ಯಾವಾಗಲೂ ಒಂದೇ ಅಂತಸ್ತಿನ ಕಟ್ಟಡಗಳಾಗಿದ್ದು, ಸಾಮಾನ್ಯವಾಗಿ ಅವುಗಳ ಎತ್ತರವು ಮೇಲೆ ಮತ್ತೊಂದು ಮಹಡಿಯಿರುವಂತೆ ಭಾವನೆಯನ್ನುಂಟು ಮಾಡುತ್ತವೆ. ಮೂಲತಃ ರೆಸಿಡೆನ್ಸಿಯು ಬ್ರಿಟಿಷ್ ವಸಾಹತುಶಾಹಿ ಶೈಲಿಯಲ್ಲಿನ ಒಂದೇ ಅಂತಸ್ತಿನ ಸಮತಲ ಕಟ್ಟಡವಾಗಿದ್ದು, ಇದನ್ನು ರೆಸಿಡೆನ್ಸಿ ಶೈಲಿಯ ವಾಸ್ತುಶಿಲ್ಪ ಎಂದು ಕರೆಯಲಾಗುತ್ತದೆ.

ಪುನರುಜ್ಜೀವನದ ಅವಧಿಯಲ್ಲಿ ಎರಡು ರೆಕ್ಕೆ ಭಾಗಗಳನ್ನು ಸೇರಿಸಲಾಯಿತು. ಇದು ಸಂಪೂರ್ಣವಾಗಿ ಸಂಯೋಜಿತ ಕಟ್ಟಡದ ಭವ್ಯವಾದ ಸಾಂಪ್ರದಾಯಿಕ ಕಂಬದ ಸಾಲು ಹೊಂದಿರುವ ದ್ವಾರಮಂಟಪವಾಗಿದ್ದು, ತ್ರಿಕೋನಾಕಾರದ ಕಮಾನು ಮತ್ತು ಬಲವರ್ಧಿತವಾದ ಕಿಟಕಿಗಳು, ಆಳವಾದ ಚಾವಡಿ ಮತ್ತು ಸುಣ್ಣದಶುದ್ಧವಾದ ಬಿಳಿಯ ಬಣ್ಣದಲ್ಲಿ ಸಂಯೋಜಿತಗೊಂಡಿದ್ದು, ಅದು ಮುಂಭಾಗಕ್ಕೆ ಹೆಚ್ಚು ಆಕರ್ಷಣೆಯನ್ನು ಒದಗಿಸಿದೆ.

 

ಮುಖ್ಯ ಕಟ್ಟಡದ ಮೊದಲ ಮಹಡಿಯನ್ನು 125 ವರ್ಷಗಳ ಹಿಂದೆ ನಿರ್ಮಿಸಲಾದ ಮೂಲ ಕಟ್ಟಡದ ವಾಸ್ತುಶಿಲ್ಪದ ವಿವರಗಳಿಗೆ ಹೊಳಪು ಬರುವಂತೆ ಯುಕ್ತ ಗಮನಹರಿಸಿ 1967ರಲ್ಲಿ ನಿರ್ಮಿಸಲಾಯಿತು. ಎರಡೂ ಮಹಡಿಗಳನ್ನು ಒಂದೇ ಸಮಯದಲ್ಲಿ ನಿರ್ಮಿಸಲಾಗಿಲ್ಲ ಮತ್ತು ಮೊದಲ ಮಹಡಿಯು ನಂತರದ ಚಿಂತನೆಯಿಂದ ಹುಟ್ಟಿದ್ದು ಎಂಬುದನ್ನು ನಂಬಲು ಕಷ್ಟವಾಗುವಷ್ಟುಮಟ್ಟಿಗೆ ವಾಸ್ತುಶಿಲ್ಪವು ಸಂಪೂರ್ಣವಾಗಿ ಸಂಯೋಜಿತಗೊಂಡಿದೆ.

ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿನ ಕೆಲವು ಸ್ಥಳಗಳಲ್ಲಿ ಎಂದರೆ ಊಟದ ಮನೆ, ಅಡುಗೆ ಮನೆ, ಮತ್ತು ಅಡುಗೆ ವಸ್ತುಗಳ ಉಗ್ರಾಣದಂತಹ ಸ್ಥಳಗಳಲ್ಲಿ ಇಟಾಲಿಯನ್ ಟೈಲ್ಸ್‍ಗಳನ್ನು ಬಳಸಲಾಗಿದೆ. ಉಳಿದ ಭಾಗಗಳಲ್ಲಿ ಮರದ ಹಲಗೆಗಳ ನೆಲಹಾಸಿದ್ದು, ಗೋಡೆಯಿಂದ ಗೋಡೆಗೆ ಮುಟ್ಟುವಂತೆ ರತ್ನಗಂಬಳಿಯನ್ನು ಹಾಸಲಾಗಿದೆ. ಮುಖ್ಯ ಹಜಾರದ ಹಿಂಭಾಗದಲ್ಲಿ ಶಾಸಕರ ಭವನಕ್ಕೆ ಅಭಿಮುಖವಾಗಿರುವ ಅಷ್ಟೇ ಭವ್ಯವಾದ ಮೊಗಸಾಲೆ ಹೊಂದಿರುವ ಬ್ಯಾಂಕ್ವೆಟ್‍ ಹಾಲ್ ಇದೆ. ಇದು ಮರದ ಹಲಗೆಯ ನೆಲಹಾಸನ್ನು ಹೊಂದಿತ್ತು. ಏಕೆಂದರೆ, ಬ್ರಿಟಿಷರ ಕಾಲದಲ್ಲಿ ಇದನ್ನು ನೃತ್ಯಸಭೆಯಾಗಿ ಬಳಸಲಾಗುತ್ತಿತ್ತು. ಅತಿಥಿಗಳ ಜೊತೆಯಲ್ಲಿರುವ ಸಿಬ್ಬಂದಿಗಳ ವಸತಿಗಾಗಿ ಪ್ರತ್ಯೇಕ ಕಾಟೇಜ್‍ನ್ನು ಸಹ ನಿರ್ಮಿಸಲಾಗಿದೆ. ರಾಜಭವನ ಕಟ್ಟಡದ ಒಟ್ಟು ನಿರ್ಮಾಣ ಪ್ರದೇಶವು 42,380 ಚದರ ಮೀಟರ್ ಅಡಿಗಳನ್ನು ಹೊಂದಿದೆ. ಮುಖ್ಯ ಕಟ್ಟಡವು ರಾಜ್ಯಪಾಲರ ಕಚೇರಿಗಳು ಮತ್ತು ನಿವಾಸವನ್ನು ಒಳಗೊಂಡಿದೆ.

×
ABOUT DULT ORGANISATIONAL STRUCTURE PROJECTS